ಕಣ್ಣೀರೆಂದು ಕಡೆಗಣಿಸುವಂತಿಲ್ಲ

Admin
0

ಕಣ್ಣೀರೆಂದು ಕಡೆಗಣಿಸುವಂತಿಲ್ಲ

Tears


    'ಕಣ್ಣೀರು ಹಾಕಬೇಡಿ, ಸಮಾಧಾನ ತಂದುಕೊಳ್ಳಿ. ಅಳೋದ್ರಿಂದ ಸಂಕಟ ಇನ್ನೂ ಹೆಚ್ಚಾಗುತ್ತದೆಯೆ ಹೊರತು ಇನ್ನೇನೂ ಪ್ರಯೋಜನವಿಲ್ಲ.' ಇಂತಹ ಸಾಂತ್ವನ ಪರ ಮಾತುಗಳನ್ನು ಕೇಳುವುದು ತೀರ ಸಾಮಾನ್ಯ.

    'ಧೈರ್ಯವಾಗಿ ಇರೋದು ಬಿಟ್ಟು, ಹೇಡಿಗಳ ಹಾಗೆ ಕಣ್ಣೀರು ಸುರಿಸುತ್ತಿಯಾ?' ಎನ್ನುವ ಮಾತುಗಳಿಗೂ ಕೊರತೆಯಿಲ್ಲ. ಅನೇಕರ ದೃಷ್ಟಿಯಲ್ಲಿ ಕಣ್ಣೀರು, ದೌರ್ಬಲ್ಯದ ಪ್ರತೀಕ. ಅಸಹಾಯಕತೆಯ ಸಂಕೇತ.
    ಆದರೆ, 'ಕಣ್ಣೀರು ದುಃಖ, ಅಸಹಾಯಕತೆ, ನೋವು, ವೇದನೆಗಳ ಅಭಿವ್ಯಕ್ತಿಯ ಪರಿಣಾಮ ಮಾತ್ರ'- ಎಂದು ತಿಳಿದರೆ ತಪ್ಪಾದೀತು. ಕಂಬನಿ ಸುರಿಸುವುದು, ಹೇಡಿತನದ ಲಕ್ಷಣವಲ್ಲ. ಅದು ಒಂದು ಅತ್ಯಗತ್ಯವಾದ ದೇಹಕ್ರಿಯೆ. ಶರೀರದಲ್ಲಿ ಮೂತ್ರ ಬೆವರು ಉತ್ಪತ್ತಿಯಾದಂತೆ ಕಣ್ಣೀರೂ ಉತ್ಪತ್ತಿಯಾಗುತ್ತದೆ. ಆದರೆ ಅದರ ಕೆಲಸ, ದೇಹದಲ್ಲಿ ಉಂಟಾಗುವ ವ್ಯರ್ಥ ಪದಾರ್ಥವನ್ನು ಮಾತ್ರ, ಹೊರಗೆ ಹಾಕುವುದಕ್ಕೆ ಸೀಮಿತವಾಗಿಲ್ಲ. ಅದರ ಕೆಲಸ ಇನ್ನೂ ಜಟಿಲ. ಕಣ್ಣಿನ ಕಾರ್ಯನಿರ್ವಹಣೆಯಲ್ಲಿ, ವಿಶೇಷವಾಗಿ ಕಣ್ಣಿನ ರಕ್ಷಣೆಯಲ್ಲಿ ಅದು ಮಹತ್ವದ ಕೆಲಸ ನಿರ್ವಹಿಸಬಲ್ಲದೆಂದು ತಿಳಿದುಬಂದಿದೆ. ಕಣ್ಣೀರು ಕೇವಲ ಕವಿಯ ಕಾವ್ಯವಸ್ತುವಾಗುಳಿದಿಲ್ಲ. ಇಂದು ಅದು ವಿಜ್ಞಾನಿಯ ಪ್ರಯೋಗವಸ್ತುವೂ ಆಗಿ ಪರಿಣಮಿಸಿದೆ. ಕಣ್ಣೀರಿನ ರಾಸಾಯನಿಕ ರಚನೆ ಅದರ ಉಪಯುಕ್ತತೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಳನ್ನು ಸಂಗ್ರಹಿಸಲು ಅನೇಕ ಪ್ರಯೋಗಗಳನ್ನು ಕೈಗೊಳ್ಳಲಾಗಿದೆ. ಇದರ ಪರಿಣಾಮವಾಗಿ ಕಣ್ಣೀರಿನ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಅನೇಕ ಹೊಸ ವಿವರಗಳು ಬೆಳಕಿಗೆ ಬರುತ್ತಿವೆ.

        ಅಳುವಾಗ ಅಥವಾ ಇನ್ನಿತರ ಭಾವೋದ್ರೇಕದ ಸಂದರ್ಭಗಳಲ್ಲಿ ಮಾತ್ರ ಕಣ್ಣೀರು ಉತ್ಪತ್ತಿಯಾಗುತ್ತದೆ ಎಂದು ತಿಳಿಯುವದು ತಪ್ಪು. ಯಾಕೆಂದರೆ, ಕಣ್ಣೀರಿನ ಗ್ರಂಥಿಗಳು ಕಣ್ಣುಗುಡ್ಡೆಯ ಮುಂಭಾಗದ ಮೇಲೆ ಯಾವಾಗಲೂ ಒಂದು ತೆಳುಪದರು ಉಳಿವಷ್ಟು ಕಣ್ಣೀರನ್ನು ಸ್ರವಿಸುತ್ತಲೇ ಇರುತ್ತವೆ. ಇದು ಕಣ್ಣನ್ನು ತೊಳೆದು, ಕಾರ್ನಿಯಾವನ್ನು ಚೊಕ್ಕಟವಾಗಿ, ಪಾರದರ್ಶಕವಾಗಿ ಇಡಲು ಸಹಕರಿಸುತ್ತದೆ. ಕಣ್ಣಿನಲ್ಲಿ ಹೀಗೆ ಯಾವಾಗಲು ಇರುವ ಕಣ್ಣೀರಿನ ಪ್ರಮಾಣ ತುಂಬ ಕಡಿಮೆ. ದಿನವೊಂದರಲ್ಲಿ ಸಾಮಾನ್ಯವಾಗಿ ಉತ್ಪತ್ತಿಯಾಗುವ ಕಣ್ಣೀರಿನ ಪ್ರಮಾಣ ಸುಮಾರು 2 ಮಿಲಿ ಲೀಟರಿನಷ್ಟು, ಕಣ್ಣೀರು ಆವಿಯಾಗುವಿಕೆಯಿಂದ ಉಂಟಾಗುವ ಕೊರತೆಯನ್ನು ತುಂಬಿಕೊಳ್ಳಲು ಇದು ಸಾಕಾಗುತ್ತದೆ. ಆದರೆ ಕಣ್ಣಿನಲ್ಲಿ ಉರಿ, ನೋವು ಉಂಟಾದರೆ ಇದರ ಪ್ರತಿಕ್ರಿಯೆಯಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಕಣ್ಣೀರು ಉತ್ಪತ್ತಿಯಾಗುತ್ತದೆ. ಕಣ್ಣನ್ನು ಮುಟ್ಟಿದಾಗ ಅಥವಾ ಹೊಗೆ, ಧೂಳು, ಆವಿ ಮೊದಲಾದ ರಾಸಾಯನಿಕ ವಸ್ತುಗಳ ಸಂಪರ್ಕ ಉಂಟಾದಾಗ ಹೆಚ್ಚಿನ ಪ್ರಮಾಣದಲ್ಲಿ ಕಣ್ಣೀರು ಉತ್ಪತ್ತಿಯಾಗುತ್ತದೆ. ಭಾವೋದ್ರೇಕವಾದಾಗಲೂ ಹೀಗೆ ಆಗಬಹುದು. ಒಂದೇ ಸಾರಿ ಹೆಚ್ಚಿನ ಪ್ರಮಾಣದಲ್ಲಿ ಕಣ್ಣೀರು ಉಂಟಾಗುವುದರಿಂದ ಅದು, ಕಣ್ಣೀರು ಚೀಲಕ್ಕೂ, ಮೂಗಿಗೂ ನಡುವಣ ಸಾಗಾಲುವೆಯಲ್ಲಿ ಹಿಡಿಸದೆ ಹೊರಗೆ ಸುರಿಯುತ್ತದೆ. ಮೂಗಿನಲ್ಲಿ ಏನಾದರೂ ಬೆಳೆದಿದ್ದರೆ, ಕಣ್ಣೀರಿನ ಸಾಗಾಲುವೆಗೆ ಅಡಚಣೆಯುಂಟಾಗಿದ್ದರೆ ಅಥವಾ ಸ್ನಾಯುಗಳು ದುರ್ಬಲವಾಗಿದ್ದರೆ ಕಣ್ಣೀರು ಹೊರಗೆ ಸುರಿಯಬಹುದು. ಇಂತಹ ಸಂದರ್ಭದಲ್ಲಿ ಶಸ್ತ್ರ ಚಿಕಿತ್ಸೆಯಿಂದ ಸಾಗಾಲುವೆಯನ್ನು ಸರಿಪಡಿಸಲಾಗುತ್ತದೆ. ಇಲ್ಲದಿದ್ದರೆ ಕಣ್ಣಿನಲ್ಲಿ ಸೋಂಕು ಸೇರಿ ಕಾರ್ನಿಯಾಕ್ಕೆ ಅಪಾಯ ತಗಲಬಹುದು.


✅ ಕಣ್ಣೀರಿನ ರಕ್ಷಣೆ, ಪೋಷಣೆ:

Tears


👉ಕಣ್ಣೀರಿನ ಮುಖ್ಯ ಉಪಯುಕ್ತತೆ, ಕಣ್ಣಿನ ರಕ್ಷಣೆ. ಗಾಳಿಯಲ್ಲಿರುವ ಧೂಳಿನ ಕಣಗಳು, ರೋಗಾಣುಗಳು ತೆರೆದ ಕಣ್ಣಿನಲ್ಲಿ ಸೇರಿಕೊಳ್ಳುವುದು ಸಹಜ. ಕಣ್ಣಿನಲ್ಲಿ ಸೇರಿಕೊಳ್ಳುವ ಈ ಧೂಳಿನ ಕಣಗಳನ್ನು ತೊಳೆದು ಹಾಕಿ, ಹಾನಿಕಾರಕ ಸೂಕ್ಷ್ಮಾಣು ಜೀವಿಗಳನ್ನು ನಾಶಪಡಿಸಿ, ಸೋಂಕು ತಗಲದಂತೆ ಕಣ್ಣಿನ ರಕ್ಷಣೆ ಮಾಡುವ ಕೆಲಸ, ಕಣ್ಣೀರಿನಿಂದ ಮಾತ್ರ ಸಾಧ್ಯ. ಇದಕ್ಕೆ ಕಣ್ಣೀರಿನಲ್ಲಿರುವ ಐಸೋಜೊಂ ಎನ್ನುವ ಕಿಣ್ವ ಕಾರಣ. ಈ ಕಿಣ್ವ ಅನೇಕ ಬಗೆಯ ಬ್ಯಾಕ್ಟಿರಿಯಾಗಳನ್ನು ನಾಶಪಡಿಸಬಲ್ಲದು. ಈ ಕಾರಣದಿಂದಾಗಿ ಕಣ್ಣೀರು ಒಂದು ಪ್ರಬಲ ಕ್ರಿಮಿನಾಶಕದಂತೆ ವರ್ತಿಸಬಲ್ಲ ಸಾಮರ್ಥ್ಯವನ್ನು ಪಡೆದಿದೆ. ಅರ್ಧ ಲೀಟರ್ ನೀರಿಗೆ ಒಂದು ತೊಟ್ಟು ಕಣ್ಣೀರನ್ನು ಸೇರಿಸಿದರೂ ಅದು ತನ್ನ ಕ್ರಿಮಿನಾಶಕ ಗುಣವನ್ನು ತೋರ್ಪಡಿಸಬಲ್ಲದು.

👉 ಕಣ್ಣೀರಿನ ಇನ್ನೊಂದು ಮುಖ್ಯ ಕೆಲಸ ಕಣ್ಣಿನ ಪೋಷಣೆ. ವಿಶೇಷವಾಗಿ ಕಾರ್ನಿಯಾದ ಪೋಷಣೆಗೆ ಕಣ್ಣೀರು ಅಗತ್ಯ. ಕಾರ್ನಿಯಾ ರಕ್ತನಾಳಗಳನ್ನು ಹೊಂದಿರುವುದಿಲ್ಲ. ಆದ್ದರಿಂದ ಅದರ ಪೋಷಣೆಗೆ ಅಗತ್ಯವಾದ ಆಮ್ಲಜನಕದ ಪೂರೈಕೆಯಾಗಲಿ, ಇಂಗಾಲದ ಡಯಾಕೈಡನ್ನು ಹೊರಗೆ ಹಾಕುವ ಕೆಲಸವಾಗಲಿ ರಕ್ತಪರಿಚಲನೆಯ ಮೂಲಕ ಆಗುವುದು ಸಾಧ್ಯವಿಲ್ಲ. ಈ ಕೆಲಸವನ್ನು ಕಾರ್ನಿಯಾದ ಮೇಲಿರುವ ಕಣ್ಣೀರಿನ ಪೊರೆ ನಿರ್ವಹಿಸುತ್ತದೆ. ಯಾಕೆಂದರೆ ವಾತಾವರಣದಲ್ಲಿಯ ಆಮ್ಲಜನಕ ಅತ್ಯಲ್ಪ ಪ್ರಮಾಣದಲ್ಲಿ ಕಣ್ಣೀರಿನಲ್ಲಿ ಕರಗಬಲ್ಲದು. ಇದಕ್ಕಿಂತ ಮುಖ್ಯವಾಗಿ ಕಣ್ಣುಮುಚ್ಚಿ ಕೊಂಡಿದ್ದಾಗ ರೆಪ್ಪೆಯ ಒಳಭಾಗದ ರಕ್ತನಾಳಗಳಲ್ಲಿ ಹರಿಯುತ್ತಿರುವ ಆಮ್ಲಜನಕ ಪ್ರಸರಣ ರೀತಿ (ಡಿಪ್ಯೂಷನ್) ಯಲ್ಲಿ ಕಣ್ಣೀರಿನಲ್ಲಿ ಕರಗುತ್ತದೆ.


👉 ಲೋಳೆ, ಎಣ್ಣೆ:
    ಕಣ್ಣೀರಿನ ಪೊರೆ, ಕಣ್ಣೀರೇ ಅಲ್ಲದೆ ಲೋಳೆ ಮತ್ತು ಎಣ್ಣೆಯಂತಹ ದ್ರವವಸ್ತುಗಳನ್ನು ಹೊಂದಿರುವುದೆಂದು, ಇತ್ತೀಚಿನ ಸಂಶೋಧನೆಗಳಿಂದ ತಿಳಿದುಬಂದಿದೆ. ಇವುಗಳಲ್ಲಿ ಪ್ರತಿಯೊಂದರ ಬಗೆಗೂ ದೀರ್ಘವಾದ ಅಧ್ಯಯನ ಮುಂದುವರಿಯುತ್ತಿದೆ. ಕಣ್ಣೀರಿನಲ್ಲಿಯ ಲೋಳೆ, ಕಾರ್ನಿಯಾದ ಮೇಲೆ ಕಣ್ಣೀರು ಸಮನಾಗಿ ಹರಡಿಕೊಳ್ಳುವುದಕ್ಕೆ ಮತ್ತು ಅದನ್ನು ಒದ್ದೆಯಾಗಿಡಲು ಸಹಾಯಕವಾಗುತ್ತದೆ. ಇದಕ್ಕೆ ಬೇಕಾಗುವ ಲೋಳೆಯ ಪ್ರಮಾಣ ಅತ್ಯಲ್ಪವಾಗಿದ್ದು, ಕಣ್ಣೀರಿನ ಚೀಲದಲ್ಲಿರುವ ಸಣ್ಣ ಸಣ್ಣ ಗ್ರಂಥಿಗಳಲ್ಲಿ ಅದು ಉತ್ಪತ್ತಿಯಾಗುತ್ತದೆ. ಕಣ್ಣುರೆಪ್ಪೆಗಳನ್ನು ಮುಚ್ಚಿ-ತೆರೆದು ಮಾಡುವಾಗ ಕಣ್ಣು ಗುಡ್ಡೆಯ ಮೇಲೆ ಅದು ಹರಡಿಕೊಳ್ಳುತ್ತದೆ. ಹೆಚ್ಚಿನ ಪ್ರಮಾಣದ ಲೋಳೆ ಕಣ್ಣೀರಿನ ಚೀಲದ ಕೆಳಭಾಗದ ನಿರ್ಗಮ ಸ್ಥಳದಿಂದ ಹೊರಟು, ಕಣ್ಣುಗುಡ್ಡೆಯ ಮೂಲೆಯಲ್ಲಿ ಒಣಗಿಹೋಗುತ್ತದೆ. ನಿದ್ರೆಯಿಂದ ಎದ್ದು ಕಣ್ಣುಜ್ಜಿಕೊಳ್ಳುವಾಗ ಇದನ್ನು ಗಮನಿಸಬಹುದು. ಈ ಲೋಳೆಯಲ್ಲಿರುವ ಯಾವ ರಾಸಾಯನಿಕ ವಸ್ತು ಕಣ್ಣನ್ನು ತೇವವಾಗಿರಿಸಲು ಸಹಾಯಕವಾಗುತ್ತದೆನ್ನುವುದು ನಿಖರವಾಗಿ ಇನ್ನೂ ತಿಳಿದುಬಂದಿಲ್ಲ. ಇದಕ್ಕೆ ಲೋಳೆಯ ವಿಶ್ಲೇಷಣೆ ಅಗತ್ಯ


    ಕಣ್ಣೀರಿನಲ್ಲಿರುವ ಇನ್ನೊಂದು ವಸ್ತುವಾದ ಎಣ್ಣೆ, ಕಣ್ಣೀರಿನೊಂದಿಗೆ ವಿಲೀನವಾಗದೆ, ಕಣ್ಣೀರಿನ ಪೊರೆಯ ಮೇಲೆ ತನ್ನದೆ ಆದ ಇನ್ನೊಂದು ಪೊರೆಯನ್ನು ನಿರ್ಮಿಸುತ್ತದೆ. ಈ ತೈಲದ ಆವರಣ, ಕಣ್ಣೀರಿನ ಆವಿಯಾಗುವಿಕೆಯ ವೇಗವನ್ನು ಕಡಿಮೆಮಾಡುತ್ತದೆ. ಇಲ್ಲದಿದ್ದರೆ ಆವಿಯಾಗುವಿಕೆಯ ಪ್ರಮಾಣ ಇನ್ನೂ ಹತ್ತು ಪಟ್ಟು ಹೆಚ್ಚುತ್ತಿತ್ತು. ಅಂದರೆ ದಿನಕ್ಕೆ 20 ಮಿ.ಮಿ. ನಷ್ಟು ಕಣ್ಣೀರು ಆವಿಯಾಗುವಿಕೆಯಿಂದಲೆ ನಷ್ಟವಾಗುತ್ತಿತ್ತು. ಅಲ್ಲದೆ, ಈ ತೈಲ, ಕಣ್ಣೀರು ಕಣ್ಣಿನಿಂದ ಚೆಲ್ಲಿ ಹೋಗುವುದನ್ನು ತಡೆಗಟ್ಟುತ್ತದೆ. ನಿದ್ರಿಸುವಾಗಿ ಮುಚ್ಚಿಕೊಂಡ ರೆಪ್ಪೆಗಳ ಮಧ್ಯೆ ಉಂಟಾಗುವ ಕಿರಿಯಗಲದ ತೆರಪಿನ ಸ್ಥಳವನ್ನೂ ತುಂಬುತ್ತದೆ. ಇದರಿಂದ ಕಣ್ಣೀರು ವ್ಯರ್ಥವಾಗಿ ಹರಿದು ಹೋಗುವುದು ತಪ್ಪುತ್ತದೆ. ನಿದ್ರಿಸಲೂ ಅನುಕೂಲವಾಗುತ್ತದೆ. ನಿದ್ರೆಯಿಂದ ಎಚ್ಚೆತ್ತಾಗ ಕಣ್ಣಿನ ಎವೆಗಳ ಮೇಲೆ ಸಂಗ್ರಹವಾದ ಅರ್ಧಮರ್ಧ ಒಣಗಿದ ಈ ತೈಲದ ಅಂಶ ಗಮನಕ್ಕೆ ಬರುತ್ತದೆ. ಈ ಎಣ್ಣೆಯ ಘಟಕಗಳನ್ನು ಕಂಡುಹಿಡಿಯಲು, ತಜ್ಞರು ಪ್ರಯತ್ನಿಸುತ್ತಿದ್ದಾರೆ. ಬೇರೆ ಬೇರೆ ವಯಸ್ಸಿನ ಜನರಲ್ಲಿ ಆರೋಗ್ಯ, ಅನಾರೋಗ್ಯ, ಸ್ಥಿತಿಯಲ್ಲಿ ಈ ಎಣ್ಣೆಯ ಘಟಕಗಳ ಪ್ರಮಾಣದಲ್ಲಾಗುವ ವ್ಯತ್ಯಾಸ, ವಿಶೇಷವಾಗಿ ಅವರ ಗಮನ ಸೆಳೆದಿದೆ.

✅ ಕೊರತೆಯ ಪರಿಣಾಮಗಳು:

    ಕಣ್ಣೀರಿನಲ್ಲಿರುವ ಲೋಳೆ, ತೈಲ ಮತ್ತು ನೀರು ಇವುಗಳಲ್ಲಿ ಯಾವುದಾದರೊಂದು ಇಲ್ಲದಿದ್ದಲ್ಲಿ ಅಥವಾ ಅದರ ಪ್ರಮಾಣದಲ್ಲಿ ಏರುಪೇರಾದರೆ ಉಂಟಾಗಬಹುದಾದ ಪರಿಣಾಮಗಳೇನು? ಇದು ತುಂಬ ಪ್ರಯೋಜನಕಾರಿಯಾದ ವಿವರಗಳನ್ನು ಪೂರೈಸಬಹುದೆಂದು ತಜ್ಞರು ಅಭಿಪ್ರಾಯಪಡುತ್ತಾರೆ. ಕಣ್ಣೀರು ಸರಿಯಾಗಿ ಉತ್ಪತ್ತಿಯಾಗದಿದ್ದರೆ ಉಂಟಾಗಬಹುದಾದ ಅನೇಕ ತೊಂದರೆಗಳ ಬಗೆಗೆ ಈಗಾಗಲೇ ಸಾಕಷ್ಟು ತಿಳಿದುಬಂದಿದೆ. ಕಣ್ಣೀರಿನ ಕೊರತೆಯಿಂದ ಕಣ್ಣು ಶುಷ್ಕವಾಗಿ, ಅನೇಕ ತೊಂದರೆಗಳುಂಟಾಗುತ್ತವೆ. ಲೋಳೆಯ ಪ್ರಮಾಣ ಕಡಿಮೆಯಾದಲ್ಲಿ ಕಣ್ಣಿನಲ್ಲಿ ಉರಿ, ರೆಪ್ಪೆಗಳಿಂದ ಘರ್ಷಣೆ ಉಂಟಾಗಿ ಕಣ್ಣಗೊಂಬೆ ಕ್ರಮೇಣ ತನ್ನ ಪಾರದರ್ಶಕತ್ವವನ್ನು ಕಳೆದುಕೊಳ್ಳಬಹುದು. ಅಲ್ಲದೆ ಕಾರ್ನಿಯಾದ ಊತವೂ ಸಂಭವಿಸಬಹುದು. 'ಎ' ಅನ್ನಾಂಗದ ಕೊರತೆಯಿಂದಲೂ ಕಣ್ಣೀರಿನಲ್ಲಿ ಪ್ರೋಟಿನ್ ಪ್ರಮಾಣ ಕಡಿಮೆಯಾಗಿ ಈ ತೊಂದರೆ (ಕಾರ್ನಿಯಾದ ಊತ) ಸಂಭವಿಸಬಹುದೆಂದು ತಿಳಿದು ಬಂದಿದೆ. ಕಣ್ಣಿನಲ್ಲಿ ಕೆಲವು ರಾಸಾಯನಿಕ ವಸ್ತುಗಳು ಸೇರಿಕೊಂಡು ಕಣ್ಣೀರ ಗ್ರಂಥಿಗಳಿಗೆ ಆಘಾತವುಂಟಾಗಿ, ಕಣ್ಣಿನ ಶುಷ್ಕತೆಗೆ, ಲೋಳೆಯ ಕೊರತೆಗೆ ಕಾರಣವಾಗಿ ಪರಿಣಮಿಸಬಹುದು. ಕಣ್ಣೀರಿನ ಕೊರತೆಯಿಂದ ಸಂಭವಿಸಬಹುದಾದ ತೊಂದರೆಗಳ ನಿವಾರಣೆಗೆ ಕಣ್ಣೀರಿನ ಪೂರಕಗಳು ಮತ್ತು ತೇವಕಾರಕಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಆದರೆ ಇದಕ್ಕಾಗಿ ಉಪಯೋಗಿಸಲ್ಪಡುವ ರಾಸಾಯನಿಕಗಳು ಕಣ್ಣಿನ ಮೇಲೆ ಯಾವುದೇ ದುಷ್ಪಪರಿಣಾಮ ಮಾಡುವಂತಿರಬಾರದು. ಇಂತಹ ಸುರಕ್ಷಿತ ರಾಸಾಯನಿಕಗಳನ್ನು ಕಂಡುಹಿಡಿಯಲು ಪ್ರಯೋಗಗಳು ಮುಂದು ವರಿಯುತ್ತಿವೆ.

    ಕೆಲವು ಸಂದರ್ಭಗಳಲ್ಲಿ ಕಣ್ಣಿನಲ್ಲಿ ಉತ್ಪತ್ತಿಯಾಗುವ ಲೋಳೆಯ ಪ್ರಮಾಣ ಹೆಚ್ಚಾಗಿ, ಕಣ್ಣಿನಲ್ಲಿ ಸಿಗ್ನತೆ ಹೆಚ್ಚುತ್ತದೆ. ಇದನ್ನು ಕಡಿಮೆ ಮಾಡಬಲ್ಲ ರಾಸಾಯನಿಕಗಳನ್ನು ಈಗಾಗಲೆ ಅಭಿವೃದ್ಧಿಪಡಿಸಲಾಗಿದೆ.


    ಕಣ್ಣಿನ ವಿಶ್ಲೇಷಣಾತ್ಮಕ ಅಧ್ಯಯನದಿಂದ ಕೆಲವು ಆನುವಂಶಿಕ ರೋಗಗಳ ಬಗೆಗೂ ತಿಳಿದುಕೊಳ್ಳಲು ಸಾಧ್ಯವೆಂದು ತಿಳಿದು ಬಂದಿದೆ. ಇದು ರಕ್ತಪರೀಕ್ಷೆಗಿಂತ, ಈ ಸಂದರ್ಭದಲ್ಲಿ ಹೆಚ್ಚು ವಿಶ್ವಾಸಾರ್ಹ ಪರೀಕ್ಷೆಯಾಗ ಬಲ್ಲದೆಂದು ಊಹಿಸಲಾಗುತ್ತಿದೆ. ಯಾಕೆಂದರೆ, ಕೆಲವು ಸಂದರ್ಭಗಳಲ್ಲಿ ಅನುವಂಶಿಕ ಗುಣಗಳನ್ನು ತೋರ್ಪಡಿಸುವ ವಸ್ತುಗಳ ಪ್ರಮಾಣ, ರಕ್ತದಲ್ಲಿ ಬದಲಾಗಬಹುದು. ಉದಾಹರಣಗೆ, ಸ್ತ್ರೀಯರಲ್ಲಿ ಗರ್ಭಧರಿಸಿದ ಸಮಯದಲ್ಲಿ ಹೀಗಾಗುವ ಸಾಧ್ಯತೆಯಿದೆ. ಆದರೆ ಕಣ್ಣೀರಿನಲ್ಲಿ ಈ ರೀತಿಯಾಗುವ ಸಾಧ್ಯತೆ ತುಂಬಾ ಕಡಿಮೆ. ಸ್ವಲ್ಪವೂ ನೋವಾಗದಂತೆ ಕಣ್ಣಿನಿಂದ ಕಣ್ಣೀರನ್ನು ಸಂಗ್ರಹಿಸಲು ಬಳಸಬಹುದಾದ ಹೀರುಗೊಳಿವೆಯೊಂದನ್ನೂ ಸಹ ತಜ್ಞರು ಈ ಪ್ರಯೋಗಕ್ಕಾಗಿ ಅಭಿವೃದ್ಧಿಪಡಿಸಿದ್ದಾರೆ.

Post a Comment

0Comments
Post a Comment (0)