ಯಂತ್ರ ಮಾನವ
ಇದು ಯಂತ್ರ ಯುಗ. ನಮ್ಮ ನಿತ್ಯ ಜೀವನದಲ್ಲಿ ಹೆಜ್ಜೆ ಹೆಜ್ಜೆಗೂ ಹಲವು ಹತ್ತು ಬಗೆಯ ಯಂತ್ರಗಳನ್ನು ನಾವು ಬಳಸುತ್ತಿರುತ್ತೇವೆ. ಕೈಗೆ ಕಟ್ಟುವ ಕೈಗಡಿಯಾರದಿಂದ, ಆಕಾಶಕ್ಕೆ ಹಾರಿಸುವ ಉಪಕರಣಗಳವರೆಗೆ ಇವುಗಳ ಕ್ಷೇತ್ರ ವಿಶಾಲ. ಯಂತ್ರಗಳು ಇಂದು ನಮಗೆ ಎಷ್ಟು ಪರಿಚಿತ ಸಾಧನಗಳೆಂದರೆ, ಅವು ನಮ್ಮ ಮಧ್ಯೆಯೇ ಇದ್ದರೂ ಅವುಗಳ ಪ್ರತ್ಯೇಕ ಇರುವಿಕೆಯ ಬಗೆಗೆ ನಮಗೆ ಕಲ್ಪನೆಯೇ ಬರುವುದಿಲ್ಲ.
'ಸ್ಟಾರ್ ವಾರ್ಸ್' ಚಲನಚಿತ್ರದಲ್ಲಿ ಪಾಲ್ಗೊಂಡ ಒಂದು ಯಂತ್ರಮಾನವಗಳ ಜೋಡಿ
ನಾವು ಬಳಸುವ ಯಂತ್ರಸಾಧನಗಳು ಹಲವಾರು ರೀತಿಯವು. ಕೆಲವು ಸರಳ, ಇನ್ನು ಕೆಲವು ಜಟಿಲ: ಸದ್ದುಗದ್ದಲವಿಲ್ಲದೆ ಕಾರ್ಯನಿರತ ಯಂತ್ರಗಳು ಕೆಲವು; ಕಿವಿ ಕಿವುಡಾಗುವಂತೆ ಅಬ್ಬರಿಸುವಂತಹ ಯಂತ್ರಗಳು ಕೆಲವು . ಪ್ರಾರಂಭದಲ್ಲಿ ಸ್ವಲ್ಪಮಾತ್ರ ಪ್ರಚೋದನೆ ಸಿಕ್ಕರೆ ಸಾಕು. ಆಮೇಲೆ ತಮ್ಮಷ್ಟಕ್ಕೆ ತಾವೇ ಕೆಲಸ ಮಾಡುವ ಯಂತ್ರಗಳೂ ಇವೆ. ಇವು ಸ್ವಯಂಚಾಲಿತ ಯಂತ್ರಗಳು, ನಾವು ತೂಕ ನೋಡುವ ಯಂತ್ರ ಇಂತಹ ಒಂದು ಸಾಧನೆ ಅದರ ಮೇಲೆ ನಿಂತು ಹತ್ತು ಪೈಸೆಯ ನಾಣ್ಯವನ್ನು ಹಾಕಿದರೆ ತಕ್ಷಣ ನಮ್ಮ ತೂಕ ಮುದ್ರಿತವಾದ ಕಾರ್ಡು ಯಂತ್ರದಿಂದ ಹೊರಬೀಳುತ್ತದೆ. ನಾವು ಉಪಯೋಗಿಸುವ ಆಟೋಮ್ಯಾಟಿಕ್ ಕೈಗಡಿಯಾರ ಇಂತಹ ಇನ್ನೊಂದು ಸಾಧನ.
ದೂರದಲ್ಲಿಯೇ ಇದ್ದು, ನಮ್ಮ ಆಜ್ಞೆಗಳಿಗೆ ಅನುಸಾರವಾಗಿ ಕೆಲಸ ಮಾಡುವ ಯಂತ್ರಗಳು ಮತ್ತೊಂದು ಪ್ರಕಾರದವು. ಇವಕ್ಕೆ ದೂರ ನಿಯಂತ್ರಿತ ಸಾಧನಗಳು ಎನ್ನಬಹುದು. ವೈರ್‌ಲೆಸ್ ಇದಕ್ಕೊಂದು ಉದಾಹರಣೆ. ಆಕಾಶಯಾನದಲ್ಲಿ ಬಳಸುವ ಸಾಧನಗಳೂ ಇದೇ ತತ್ತ್ವವನ್ನು ಆಧರಿಸಿ ಕೆಲಸ ಮಾಡುತ್ತವೆ. ಈಗ ಸುಮಾರು 35 ವರ್ಷಗಳ ಹಿಂದೆ ಕುಜಗ್ರಹದ ಮೇಲೆ ಇಳಿದ ವೈಕಿಂಗ್ ಬಾಹ್ಯಾಂತರಿಕ್ಷ ನೌಕೆಗಳು, ಇಲ್ಲಿನ ಅಜ್ಞೆಗಳಿಗನುಸಾರವಾಗಿ ಕುಜಗ್ರಹದ ಅನ್ವೇಷಣಾಕಾರ್ಯವನ್ನು ಯಶಸ್ವಿಯಾಗಿ ಪೂರೈಸಿದವು. ಈ ಕೆಲಸಕ್ಕೆ ಸಹಾಯಕವಾದದ್ದು ಅದರಲ್ಲಿ ಅಳವಡಿಸಿದ್ದ ಯಂತ್ರಮಾನವ. ಈ ಕೆಲಸದಲ್ಲಿ ಅದರ ಒಂದು ಕೈ ಮುರಿದಿದ್ದು, ನಂತರ ಭೂಮಿಯಿಂದಲೇ ದೂರನಿಯಂತ್ರಣ ವಿಧಾನಗಳ ಸಹಾಯದಿಂದ ಅದನ್ನು ಮತ್ತೆ ಸರಿಪಡಿಸಿದ್ದು ಒಂದು ರೋಮಾಂಚಕ ಘಟನೆ. ನಿಮಗಿದು ನೆನಪಿರಬೇಕಲ್ಲವೆ? ಈ ಯಂತ್ರಮಾನವ, ಇತ್ತೀಚಿನ ಅತ್ಯಂತ ಸುಧಾರಿತ ಯಂತ್ರಸಾಧನಗಳಲ್ಲೊಂದು.
'ಯಂತ್ರಮಾನವ' ಹೆಸರೇ ಸೂಚಿಸುವಂತೆ 'ಮಾನವನನ್ನು ಹೋಲುವ ಯಂತ್ರ' ಎನ್ನುವುದಕ್ಕಿಂತ 'ಮಾನವನು ಮಾಡುವ ಕೆಲಸವನ್ನು ನಿರ್ವಹಿಸಬಲ್ಲ ಯಂತ್ರಸಾಧನ' ಎಂದರೆ ಹೆಚ್ಚು ಸೂಕ್ತ. ಒಂದು ಯಂತ್ರಮಾನವ ಒಬ್ಬ ಮನುಷ್ಯ ಮಾಡುವ ಕೆಲಸವನ್ನು ಮಾಡಬಹುದು ಅಥವಾ ಹತ್ತಾರು ಜನ ಮಾಡುವಷ್ಟು ಕೆಲಸವನ್ನೂ ಮಾಡಬಹುದು. ಈ ಕೆಲಸ ಸಂಪೂರ್ಣವಾಗಿರ ಬಹುದು. ಭಾಗಶಃವೂ ಆಗಿರಬಹುದು.
'ಯಂತ್ರಮಾನವ'ಕ್ಕೆ ಆಂಗ್ಲ ಭಾಷೆಯಲ್ಲಿ 'ರೋಬಾಟ್’' ಎಂದು ಹೆಸರು. ಇದರ ಮೂಲ ಜೆಕೊಪ್ಲೋವಾಕಿಯಾದ ಕಾರೆಲ್ ಚಾಪಕ್‌ನ ನಾಟಕದಿಂದ ಪಡೆದದ್ದು. ಜೆಕ್ ಭಾಷೆಯಲ್ಲಿ ರಾಬಟ್ ಎಂದರೆ 'ಕೆಲಸಮಾಡು' ಎಂದರ್ಥ. ಈ ನಾಟಕದಲ್ಲಿ ಬರುವ ಕಾರಖಾನೆಯೊಂದರ ಕೆಲಸಗಾರರೆಲ್ಲ ಯಂತ್ರ ಮಾನವರೇ.
👉ಯಂತ್ರಮಾನವನ ಕತೆ :
ಯಂತ್ರಗಳ, ಸ್ವಯಂಚಾಲಿತಗಳ ಕಲ್ಪನೆ. ಇಂದು ನಿನ್ನೆಯದಲ್ಲ. ಪುರಾಣಗಳಲ್ಲಿ ದಂತಕಥೆಗಳಲ್ಲಿ ಇವುಗಳ ಬಗೆಗೆ ಕೇಳಬಹುದು. ನಮ್ಮ ರಾಮಾಯಣದಲ್ಲಿ ಉಲ್ಲೇಖಿತವಾದ 'ಪುಷ್ಪಕ ವಿಮಾನ', ಮಹಾಭಾರತದಲ್ಲಿ ಪ್ರಸ್ತಾಪಿಸಲ್ಪಡುವ ಮಣಿರಥ ಇಂತಹ ಸಾಧನಗಳಾಗಿರಬಹುದು ಎಂದು ಕೆಲವು ತಜ್ಞರ ಊಹೆ! ವಿಕ್ರಮಾದಿತ್ಯನ ಕಥೆಯಲ್ಲಿ ಬರುವ ಮುತ್ತಿನಹಾರವನ್ನು ನುಂಗುವ ಗೂಟ, ಸಿಂಹಾಸನದ ಮೆಟ್ಟಿಲುಗಳ ಎರಡೂ ಕಡೆಗಳಲ್ಲಿನ ಕಥೆ ಹೇಳುವ ಗೊಂಬೆಗಳು, ಕೀಲಿ ಕೊಟ್ಟರೆ ಹಾರುವ ಕುದುರೆಗಳು ಇಂತಹ ಸಾಧನಗಳಾಗಿರಬಹುದು.
ಪಾಶ್ಚಾತ್ಯ ರಾಷ್ಟ್ರಗಳಲ್ಲಿಯೂ ಇಂತಹ ಅನೇಕ ನಿದರ್ಶನಗಳಿವೆ. ಹೋಮರನ ಕಾಲದಿಂದಲೂ ಯಂತ್ರಮಾನವರ ಕಲ್ಪನೆಯಿತ್ತು ಎನ್ನಲಾಗಿದೆ. ಆಗ, ಇವು ಮಾನವಾಕೃತಿಯನ್ನು ಪಡೆದ ದೈತ್ಯಗಳೆಂದೂ, ಇವುಗಳಿಂದ ಜನರಿಗೆ ತುಂಬಾ ಹಿಂಸೆಯಾಗುತ್ತಿತ್ತೆಂದೂ ತಿಳಿಯಲಾಗುತ್ತಿತ್ತು. ಇವು ಮನುಷ್ಯರ ಮಾತುಗಳನ್ನು ಕೇಳುವ, ಪ್ರತಿಕ್ರಿಯೆ ತೋರಿಸುವ ಸಾಮರ್ಥ್ಯ ಹೊಂದಿದ್ದವು.
ಕ್ರಿ.ಪೂ. 400 ರಲ್ಲಿ ಲಿರ್ಹತಾಸ್ ಹಾರಬಲ್ಲ ಮರದ ಪಾರಿವಾಳ ತಯಾರಿಸಿದ್ದನೆಂದು ಉಲ್ಲೇಖವಿದೆ. ಕ್ರಿ.ಪೂ. 250 ರಲ್ಲಿ ಅಲೆಕ್ಸಾಂಡ್ರಿಯಾದಲ್ಲಿ ಸ್ವಯಂಚಾಲಿತ ಗಡಿಯಾರ ಇತ್ತೆಂದು ಹೇಳಲಾಗಿದೆ. ಒಂದನೆಯ ಶತಮಾನದಲ್ಲಿ ಗ್ರೀಕ್ ಸೇವಕನೊಬ್ಬ ಕುಡಿಯುವ, ಹಾರುವ ಪಕ್ಷಿಯನ್ನು ನಿರ್ಮಿಸಿದ್ದರ ಬಗೆಗೆ ವಿವರಗಳು ತಿಳಿದು ಬರುತ್ತವೆ.
ಫ್ರಾನ್ಸ್ ದೇಶದಲ್ಲಿ ಬರೆಯುವ ರೇಖೆಗಳನ್ನು ಎಳೆಯುವ, ಸಂಗೀತ ನುಡಿಸುವ ಯಂತ್ರಮಾನವಗಳು ಇದ್ದವು. ಕೆಲವು ಹೊರನೋಟಕ್ಕೆ ಮಾತ್ರ ಯಂತ್ರಗಳೆಂದು ಕಂಡುಬಂದರೂ ಇವುಗಳ ಒಳಗೆ ಮನುಷ್ಯರೆ ಇರುತ್ತಿದ್ದರು. ವಿಯೆನ್ನಾದ ವಸ್ತು ಸಂಗ್ರಹಾಲಯದಲ್ಲಿ 18ನೆಯ ಶತಮಾನದ ಮಧ್ಯಭಾಗದಲ್ಲಿ ರಚಿತವಾದ ಬರೆಯುವ ಯಂತ್ರವೊಂದನ್ನು ಪ್ರದರ್ಶಿಸಲಾಗಿದೆ. ಮಧ್ಯಯುಗದಲ್ಲಿ ಬಳಕೆಯಲ್ಲಿದ್ದ ಇಂತಹ ಸಾಧನಗಳೇ ಆಧುನಿಕ ಯಂತ್ರಮಾನವದ ಮೂಲರೂಪಗಳು. ಇವುಗಳಲ್ಲಿ ಕಾಲ ಕ್ರಮೇಣ, ಅಗತ್ಯಕ್ಕೆ ತಕ್ಕಂತೆ ಸುಧಾರಣೆಯಾಗುತ್ತಾ ಬಂದು ಇಂದಿನ ಆಧುನಿಕ ಮಟ್ಟವನ್ನು ಅವು ತಲುಪಿವೆ ಎಂದು ಹೇಳಬಹುದು.
ಯಾವುದೇ ಒಂದು ಉಪಕರಣ ಸುಧಾರಿಸುತ್ತ ಹೋಗಲು ಅದು ಸಾಕಷ್ಟು ಪ್ರಯೋಜನಕಾರಿಯಾದ, ಬಳಕೆಯಲ್ಲಿರುವ ಸಾಧನವಾಗಿರಬೇಕು. ಮಧ್ಯಯುಗೆ ಉಪಯುಕ್ತ ಕಳೆದು ಆಧುನಿಕ ಯುಗ ಪ್ರಾರಂಭವಾದಂತೆ ಯಂತ್ರಮಾನವ ಕೇವಲ ಆಟಿಗೆಯ ವಿನೋದದ ವಸ್ತುವಾಗಿ ಉಳಿಯಲಿಲ್ಲ. ಅನೇಕ ಕೆಲಸಗಳಲ್ಲಿ ಅದು ಸಾಧನವಾಗಿ ಪರಿಣಮಿಸಿತು. ಕೈಗಾರಿಕೆಗಳಲ್ಲಿ ಅದರ ಬಳಕೆ ಹೆಚ್ಚಿತು. ವಿಶೇಷವಾಗಿ ಕೈಗಾರಿಕಾ ಕ್ರಾಂತಿಯ ನಂತರ ಉದ್ದಿಮೆಗಳಲ್ಲಿ ಯಾಂತ್ರೀಕರಣ ಹೆಚ್ಚಿತು. ಕಾರಖಾನೆಗಳಲ್ಲಿ ಗದ್ದಲ, ದಟ್ಟಣೆ, ಅಸಹನೀಯ ವಾತಾವರಣ, ಅಪಾಯಕಾರಿ ಸನ್ನಿವೇಶಗಳು ಉಂಟಾಗತೊಡಗಿದವು. ಇಂತಹ ಸಂದರ್ಭಗಳಲ್ಲಿ ಮನುಷ್ಯ ಕಾರ್ಮಿಕನ ಬದಲು ಅವನ ಕಾರ್ಯ ನಿರ್ವಹಿಸಬಲ್ಲ ಯಂತ್ರಸಾಧನಗಳನ್ನು ಬಳಸುವುದು ಹೆಚ್ಚು ಅನುಕೂಲವೆಂಬುದನ್ನು ತಜ್ಞರು ಕಂಡುಕೊಂಡರು. ಇದು ಬೇರೆ ಬೇರೆ ಕೆಲಸಕ್ಕೆ ಹೊಂದಿಕೊಳ್ಳುವ ಅನೇಕ ಹೊಸ ಬಗೆಯ ಸ್ವಯಂ ಚಾಲಿತಗಳ ಅಭಿವೃದ್ಧಿಗೆ ಪ್ರೇರಕವಾಯಿತು. ಅವುಗಳ ಕಾರ್ಯ ನಿರ್ವಹಣೆಯನ್ನು ಉತ್ತಮಗೊಳಿಸಬಲ್ಲ, ಅನೇಕ ಹೊಸ ತಾಂತ್ರಿಕ ವಿಧಾನಗಳ ಅನ್ವೇಷಣೆಗೂ ಕಾರಣವಾಯಿತು.
ಪ್ರಾರಂಭದಲ್ಲಿ ತಪ್ಪಿಲ್ಲದೆ ಕೆಲಸಮಾಡುವ ಒಂದೇ ರೀತಿಯ ಕೆಲಸವನ್ನು ಪುನರಾವರ್ತಿಸಬಲ್ಲ ಆಜ್ಞೆಯನ್ನು ಪಾಲಿಸುವಂಥವು ನಿರ್ಮಾಣವಾದುವು. ಅವುಗಳ ಸ್ಮರಣಶಕ್ತಿ ಕಡಿಮೆಯಾಗಿತ್ತು. ತಪ್ಪುಗಳನ್ನು ತಿದ್ದಿಕೊಳ್ಳಲು ತಿಳಿಯುತ್ತಿರಲಿಲ್ಲ. ಸ್ವಂತ ನಿರ್ಧಾರಕೈಗೊಳ್ಳುವ ಸಾಮರ್ಥ್ಯವಂತೂ ದೂರವೇ ಉಳಿಯಿತು. ಆದರೆ ಕ್ರಮೇಣ ಈ ಎಲ್ಲ ವಿಷಯಗಳಲ್ಲಿಯೂ ಪ್ರಗತಿಯನ್ನು ಸಾಧಿಸಲಾಯಿತು. ಗಣಕಯಂತ್ರಗಳಲ್ಲಾದ ಸುಧಾರಣೆ ಮತ್ತು ದೂರ ನಿಯಂತ್ರಣ ವಿಧಾನಗಳಲ್ಲಿ ಸಾಧಿಸಲಾಗಿರುವ ಪ್ರಗತಿ ಯಂತ್ರ ಮಾನವನ ಅದ್ಭುತ ಸುಧಾರಣೆಗೆ ಸಹಾಯಕವಾಗಿ ಪರಿಣಮಿಸಿದವು.
ಮೊದಮೊದಲು ಉದ್ದೇಶಪೂರ್ವಕವಾಗಿಯಾದರೂ ಮಾನವನ ದೇಹವನ್ನು ಹೋಲುವ ಯಂತ್ರಮಾನವಗಳನ್ನು ರಚಿಸಲಾಗುತ್ತಿತ್ತು. ನಂತರ ಇದು ಅನವಶ್ಯಕ ಎಂದು ಕೈಬಿಡಲಾಯಿತು. ಇತ್ತೀಚೆಗೆ ಇವು ಯಾವ ಆಕಾರದವೂ ಆಗಿರುತ್ತವೆ. ಒಟ್ಟಿನಲ್ಲಿ, ಕೆಲಸಕ್ಕೆ ಅನುಕೂಲವಾದ ಆಕಾರವನ್ನು ಹೊಂದಿರುತ್ತವೆ.
👉 ರಚನೆ:
ಯಂತ್ರಮಾನವ, ಹಲವಾರು ಯಂತ್ರಗಳ ಒಂದು ಸಂಯೋಜಿತ ವ್ಯವಸ್ಥೆ. ಇದರಲ್ಲಿ ಪ್ರಭಾಕೋಶ, ಮೈಕ್ರೋಫೋನ್, ಸಂಪರ್ಕ ಸ್ವಿಚ್‌ಗಳು ಮತ್ತು ರಾಸಾಯನಿಕವಾಗಿ ಪ್ರಚೋದಿಸಲ್ಪಡುವ ಭಾಗಗಳಿರುತ್ತವೆ. ಇವುಗಳನ್ನು ನಮ್ಮ ದೇಹದ ಕಣ್ಣು, ಕಿವಿ, ಮೂಗು ಮತ್ತು ನಾಲಿಗೆಗೆ ಹೋಲಿಸಬಹುದು. ಇದರಲ್ಲಿಯ ಟ್ರಾನ್ಸಿಸ್ಟರ್ ವ್ಯೂಹ ನಮ್ಮ ದೇಹದ ನರಮಂಡಲ ಇದ್ದಂತೆ. ಇದರಲ್ಲಿಯ ಕಂಪ್ಯೂಟರ್ ಮಿದುಳಿನಂತೆ. ಇದು ನಮ್ಮ ದೇಹಕ್ಕೂ ಯಂತ್ರಮಾನವನ ದೇಹಕ್ಕೂ ಇರುವ ಸ್ಕೂಲವಾದ ಹೋಲಿಕೆ.
👉 ಯಂತ್ರಮಾನವನ ಮಾದರಿ:
1. ಬಣ್ಣಗಳನ್ನು ಗುರುತಿಸಬಲ್ಲ ವಿದ್ಯುತ್ ಪ್ರಭಾ ಕೊಳವೆಗಳು.
2. ಧೂಮಪಾನ ಕ್ರಿಯೆಯ ನಿಯಂತ್ರಕ
3. ತಲೆಯ ಚಲನೆಯನ್ನು ನಿಯಂತ್ರಿಸುವ ವ್ಯವಸ್ಥೆ
4. ಚಲನೆಯನ್ನು ನಿರ್ವಹಿಸಬಲ್ಲ ಚಾಲಕ
5. ಕೈಬೆರಳುಗಳ ಚಲನೆಯನ್ನು ನಿಯಂತ್ರಿಸುವ ಸಾಧನ
6. ಬಣ್ಣಗಳಿಂದ ಪ್ರಚೋದಿತವಾಗುವ ವಿದ್ಯುತ್ ಪ್ರಭಾ ಕೋಶಗಳು.
7. ತೋಳು ಮತ್ತು ಬೆರಳುಗಳ ಚಾಲಕ ವ್ಯವಸ್ಥೆ.
8. ವಿದ್ಯುತ್ ನರಮಂಡಲದ ಕೇಂದ್ರ
9. ಎಡಕಾಲಿನ ಚಲನೆಯ ಸನ್ನೆಗಳು
10. ಕಾಲುಗಳ ಚಲನೆಗೆ ಸಹಾಯಕವಾಗಬಲ್ಲ ಯಂತ್ರಗಳು
11. ಕೈಬೆರಳುಗಳ ಚಲನೆಯನ್ನು ನಿರ್ವಹಿಸುವ ತಂತಿಗಳು
12. ಕಾಲುಗಳ ಚಲನೆಗೆ ಬಳಸುವ ಚಾಲಕ ದಂಡ
13. ಚಾಲಕ ಸರಪಳಿ
14. ರಬ್ಬರ್ ಟೈರ್ ರೋಲರ್‌ಗಳು
15. ನಿಯಂತ್ರಕ ಕೇಬಲ್‌ಗಳು
ಯಂತ್ರಮಾನವದ ಬಹು ಮುಖ್ಯವಾದ ಅಂಗ ಅದರ ಮೆದುಳು. ಇದು ಗಣಕಯಂತ್ರವಲ್ಲದೆ ಮತ್ತೇನಲ್ಲ. ಇದು ಯಂತ್ರಮಾನವದ ಎಲ್ಲ ಕ್ರಿಯೆ ಪ್ರತಿಕ್ರಿಯೆಗಳ ನಿಯಂತ್ರಣ ಕೇಂದ್ರ. ನಮ್ಮ ಮಿದುಳಿನಿಂದ ದೇಹದ ಎಲ್ಲ ಅವಯವಗಳಿಗೆ ಆಜ್ಞೆ ರವಾನಿಸಲ್ಪಡುವಂತೆ, ಯಂತ್ರಮಾನವನಲ್ಲಿಯೂ ಅದರ ಅಂಗಾಗಗಳಿಗೆ ಕಾರ್ಯನಿರ್ವಹಿಸಲು ಇಲ್ಲಿಂದಲೇ ಆಜ್ಞೆಗಳು ಹೊರಡುತ್ತವೆ. ಇತ್ತೀಚೆಗೆ ಗಣಕಯಂತ್ರದಲ್ಲಾದ ಸುಧಾರಣೆಗಳಿಂದಾಗಿ ಅದು ಅದ್ಭುತ ಕೆಲಸಗಳನ್ನು ನಿರ್ವಹಿಸಬಲ್ಲದು. ಮೂಲತಃ ಯಂತ್ರಮಾನವದ ಕಾರ್ಯ ಸಾಮರ್ಥ್ಯ ಅದು ಹೊಂದಿರುವ ಗಣಕಯಂತ್ರದ ಶಕ್ತಿಯನ್ನು ಅವಲಂಬಿಸಿದೆ.
ಸಾಮಾನ್ಯವಾಗಿ, ಯಂತ್ರಮಾನವಗಳ ಕಾರ್ಯ ನಿರ್ವಹಣೆಯನ್ನು ಮೂರು ಹಂತಗಳಾಗಿ ವಿಂಗಡಿಸಬಹುದು.
1. ಸಲಹೆ ಸೂಚನೆ ಸ್ವೀಕರಣೆ,
2. ಅವುಗಳ ಶೇಖರಣೆ ಮತ್ತು
3 ಅವುಗಳ: ಸ್ಮರಣೆ ಮತ್ತು ಬಳಕೆ.
ಯಾವುದೆ ಯಂತ್ರಮಾನವ ಕೆಲಸವನ್ನು ಪ್ರಾರಂಭಿಸುವುದಕ್ಕೆ ಮುಂಚೆ ಅದಕ್ಕೆ ಸರಿಯಾದ ತರಬೇತಿ ಅಗತ್ಯ. ಕೊಟ್ಟ ಸಲಹೆ ಸೂಚನೆಗಳನ್ನು. ಮಾಹಿತಿಗಳನ್ನು ಅದು ಯಥಾವತ್ತಾಗಿ ಗ್ರಹಿಸಿ, ಅವುಗಳನ್ನು ಅದರ ಸ್ಮರಣ ವಿಭಾಗದಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುತ್ತದೆ. ಈ ವಿಭಾಗ ಸಾಮಾನ್ಯವಾಗಿ, ಲೋಹದ ಉಂಗುರಗಳನ್ನು ಹೊಂದಿರುತ್ತದೆ. ಇಲ್ಲಿ ಸಂಗ್ರಹಿಸಿಟ್ಟ ಮಾಹಿತಿಗಳನ್ನು ಸಂದರ್ಭಕ್ಕೆ ಸರಿಯಾಗಿ ನೆನಪಿಸಿಕೊಂಡು ಅವುಗಳ ಸಹಾಯದಿಂದ ಸೂಕ್ತ ರೀತಿಯಲ್ಲಿ ಕೆಲಸ ಮಾಡಲು ತಕ್ಕ ಪ್ರಚೋದನೆಗಳನ್ನು ಅದು ತನ್ನ ಅಂಗಾಂಗಗಳಿಗೆ ಕೊಡುತ್ತದೆ. ಇದಕ್ಕೆ ಆಜ್ಞೆ ಎನ್ನಬಹುದು. ಈ ಆಜ್ಞಾಕೇಂದ್ರದಿಂದ ಹೊರಟ ಆಜ್ಞೆಗಳು ಟ್ರಾನ್ಸಿಸ್ಟರ್ ಮಂಡಲ ಅಥವಾ ಇನ್ನಿತರ ವಾಹಕ ವ್ಯವಸ್ಥೆಯ ಮೂಲಕ ಯಂತ್ರಮಾನವದ ಆವಯವಗಳಿಗೆ ತಲುಪಿ, ಕೆಲಸ ಮಾಡಲು ಪ್ರೇರಣೆಯನ್ನು ಉಂಟುಮಾಡುತ್ತವೆ. ಇದನ್ನು ನಮ್ಮ ಮಿದುಳಿನಿಂದ ಹೊರಟ ಆಜ್ಞೆ, ನರಗಳ ಮೂಲಕ ನಮ್ಮ ಕೈಕಾಲುಗಳಿಗೆ ತಲುಪಿ ಅವು ಕೆಲಸ ಮಾಡುವ ರೀತಿಗೆ ಹೋಲಿಸಬಹುದು.
✔ ಚಲನೆ:
ಪ್ರಾಚೀನ ಕಾಲದಲ್ಲಿ ಉಲ್ಲೇಖಿತವಾದ ಯಂತ್ರಮಾನವಗಳು ಎಲ್ಲಿ ಬೇಕಾದರೂ ಸಂಚರಿಸುತ್ತಿದ್ದವು. ಆದರೆ ಇಂದಿನ ಯುಗದ ಯಂತ್ರಮಾನವದ ಚಲನೆ ಒಂದು ಸೀಮಿತ ಮಟ್ಟದಲ್ಲಿ ಮಾತ್ರ. ಕೆಲವು ಯಂತ್ರಮಾನವಗಳು ತಮ್ಮ ಜಾಗವನ್ನು ಬಿಟ್ಟು ಚಲಿಸಲಾರವು. ಚಲಿಸುವ ಯಂತ್ರಮಾನವಗಳೂ ಇವೆ. ಇವು ನಿಶ್ಚಿತ ಮಾರ್ಗದಲ್ಲಿ, ನಿರ್ದಿಷ್ಟ ಅಂತರದವರೆಗೆ ಮಾತ್ರ ಚಲಿಸುತ್ತವೆ. ರಾಬಟ್‌ಗಳು ಹೆಚ್ಚು ಹೆಚ್ಚು ಚಲಿಸಿದಂತೆ ಮಾಡಿದಷ್ಟೂ ಅವುಗಳ ಉಪಯುಕ್ತತೆ ಹೆಚ್ಚುತ್ತದೆ. ಇವುಗಳನ್ನು ಸ್ಫೋಟಕ ವಸ್ತುಗಳು, ವಿಕಿರಣಜಿನ್ನ, ವಸ್ತುಗಳನ್ನು ಸಾಗಿಸಲು, ಅನ್ವೇಷಣೆ ಪರೀಕ್ಷೆಗಳನ್ನು ನಡೆಸಲು ಬಳಸಬಹುದು. ಅಮೆರಿಕದಲ್ಲಿ ಸುರಂಗಗಳನ್ನು ಮತ್ತು ಪೈಪ್‌ಗಳನ್ನು ಪರೀಕ್ಷಿಸಲು ಇಂತಹ ಸಾಧನಗಳನ್ನು ಬಳಸಲಾಗುತ್ತಿದೆ. ಅಲ್ಲದೆ ಗ್ಯಾರೇಜ್‌ಗಳಲ್ಲಿ, ಗ್ರಹಕೃತ್ಯಗಳಲ್ಲಿ, ಕಾರಖಾನೆಗಳಲ್ಲಿ ಚಲಿಸುವ ಯಂತ್ರಮಾನವಗಳಿಂದ ಹೆಚ್ಚಿನ ಕೆಲಸ ಪಡೆದುಕೊಳ್ಳಬಹುದು.
ಆದರೆ ಅವುಗಳನ್ನು ತೀರ ಸ್ವತಂತ್ರವಾಗಿ ಚಲಿಸುವಂತೆ ಮಾಡುವುದು ಕಷ್ಟ ಅವುಗಳ ಚಲನೆಯ ಮೇಲೆ ಹಿಡಿತವಿಲ್ಲದಿದ್ದರೆ ಅನೇಕ ಅಪಾಯಗಳೂ ಸಂಭವಿಸಬಹುದು. ಸ್ಫೋಟಕದಂತಹ ಅಪಾಯಕಾರಿ ವಸ್ತುಗಳನ್ನು ಸಾಗಿಸುವಾಗ ಚಲನೆಯಲ್ಲಿ ವ್ಯತ್ಯಾಸವಾದರೆ ಅಪಾಯಕ್ಕೆಡೆಮಾಡಿಕೊಡಬಹುದು. ಚಲಿಸುವ ಯಂತ್ರಮಾನವಗಳಿಂದ ಅನುಕೂಲಗಳಿರುವಂತೆ ಅನಾನುಕೂಲಗಳೂ ಇವೆ. ವಿಶೇಷವಾಗಿ ಗೃಹಕೃತ್ಯಗಳಲ್ಲಿ ಬಳಸುವ ಯಂತ್ರಮಾನವಗಳು ಆದಷ್ಟು ಅಪಾಯರಹಿತವಾಗಿರುವಂತೆ ನೋಡಿಕೊಳ್ಳಬೇಕಾಗುತ್ತದೆ. ಇದಕ್ಕೆ ತಕ್ಕ ಮುಂಜಾಗರೂಕತೆಯನ್ನು ತೆಗೆದುಕೊಳ್ಳಲಾಗುತ್ತದೆ.
✔ ಅಂಗಾಂಗಗಳು:
ನಿಯಂತ್ರಣ ವಿಭಾಗ(ಗಣಕಯಂತ್ರ ಅಥವಾ ಮಿದುಳು) ವನ್ನು ಬಿಟ್ಟರೆ, ಯಂತ್ರಮಾನವದಲ್ಲಿ ಮುಖ್ಯವಾದ ಅಂಗವೆಂದರೆ ಕೈ. ಇದನ್ನು ಮುಖ್ಯವಾಗಿ ತೋಳು, ಮೊಣಕೈ, ಹಸ್ತಗಳೆಂದು ವಿಭಾಗಿಸಬಹುದು. ಬೇರೆ ಬೇರೆ ಕೆಲಸಗಳಿಗೆ ಸಹಾಯಕವಾಗುವಂತೆ ಇವುಗಳ ಉದ್ದ, ಚಲನೆ ಮತ್ತು ಸಾಮರ್ಥ್ಯಗಳಲ್ಲಿ ಬದಲಾವಣೆ ಕಂಡು ಬರುತ್ತದೆ.
ಯಂತ್ರಮಾನವಗಳ ಕೆಲಸ ಸಮರ್ಪಕವಾಗಿ ನಡೆಯಲು ಅದರ ತೋಳಿನ ಚಲನೆ ಆದಷ್ಟು ಸರಾಗವಾಗಿರಬೇಕು. ಅದನ್ನು ಬೇಕಾದಂತೆ ತಿರುಗಿಸಲು ಸಾಧ್ಯವಾಗುವಂತಿರಬೇಕು. ಅಲ್ಲದೆ ಅದು ಹಗುರವಾಗಿ, ದೃಢವಾಗಿರಬೇಕು. ಅದರ ಭಾರ ಹೆಚ್ಚಿದರೆ ಅದಕ್ಕೆ ಕೆಲಸ ನಿರ್ವಹಿಸಲು ಹೆಚ್ಚಿನ ಚೈತನ್ಯ ಗ್ರ೦ ವಾಗುತ್ತದೆ. ಅದರ ಜಡತ್ವ ಹೆಚ್ಚುವುದರಿಂದ ಅದನ್ನು ನಿಯಂತ್ರಿಸುವುದೂ ಕಷ್ಟವಾಗುತ್ತದೆ. ಆದರೆ ಕೈ ದೃಢವಾದರೆ ಹೆಚ್ಚಿನ ಭಾರವನ್ನೆತ್ತಲು ಅನುಕೂಲ. 'ಪ್ರೋಗ್ರಾಮ್ಸ್ ಅಂಡ್ ಮಿನಿ ಸಿಸ್ಟಮ್ಸ್ ಕಾರ್ಪೋರೇಷನ್'ಎನ್ನುವ ಸಂಸ್ಥೆ ತಯಾರಿಸಿದ ಯಂತ್ರಮಾನವವೊಂದರ ತೂಕ 7.5 ಕಿ.ಗ್ರಾಂ. ನೆಲಕ್ಕೆ ಸಮಾನಾಂತರವಾಗಿ ಹಿಂದೆ ಮುಂದೆ + 45° ಕೋನಮಾಡಿ ತಿರುಗುವ ತೋಳನ್ನು ಇದು ಹೊಂದಿದೆ. ಇದರ ಉದ್ದ 90 ಸೆಂ.ಮೀ. ಈ ತೋಳಿನ ತುದಿಗೆ ಲಂಬವಾಗಿ 60 ಸೆಂ.ಮೀ ಉದ್ದದ ಮೊಳಕೈಯನ್ನು ಜೋಡಿಸಲಾಗಿದೆ. 7.5 ಸೆಂ.ಮೀ. ಉದ್ದರ ಬೆರಳಿರುವ ಹಸ್ತವನ್ನೂ ಇದು ಹೊಂದಿದೆ. ಇದರ ಸಹಾಯದಿಂದ 2.25 ಕಿ.ಗ್ರಾಂ ಭಾರದ ವಸ್ತುಗಳನ್ನು ಈ ರಾಬಟ್ ಎತ್ತಬಲ್ಲದು.
✔ 'ಯಂತ್ರಮಾನವ'ದ ತೋಳಿನ ಚಲನಾ ವಿನ್ಯಾಸ
ಯಂತ್ರಮಾನವದ ಹಸ್ತ ರಚನೆ ವಿನ್ಯಾಸ ಅದು ನಿರ್ವಹಿಸಬೇಕಾದ ಕೆಲಸಕ್ಕೆ ಅನುಗುಣವಾಗಿ ರೂಡಿಸಿರುತ್ತಾರೆ. ಉದಾಹರಣೆಗೆ, ಕಬ್ಬಿಣದ ಮೊಳೆಗಳನ್ನು ಆರಿಸುವ ಹಸ್ತರಚನೆಗೂ, ಮನೆಯಲ್ಲಿಯ ಪಾತ್ರೆಗಳನ್ನು ಎತ್ತಿಡುವ ಹಸ್ತರಚನೆಗೂ ವ್ಯತ್ಯಾಸ ಇರಬೇಕಾದ್ದು ಸಹಜ ತಾನೆ!
ಚಲಿಸುವ, ನಡೆಯುವ ಯಂತ್ರಮಾನವಗಳಿಗೆ ಕಾಲುಗಳನ್ನು ಅಳವಡಿಸಲಾಗುತ್ತದೆ. ನಾಲ್ಕು ಕಾಲುಗಳನ್ನು ಅಳವಡಿಸುವುದೂ ಉಂಟು. ಅಮೆರಿಕೆಯ ಸೈನ್ಯದಳದಲ್ಲಿ ಇಂತಹ ರಾಬಟ್‌ಗಳಿವೆ.
ಯಂತ್ರಮಾನವದ ಅಂಗಾಂಗಗಳು ಚಲಿಸುವುದೊಂದೇ ಮುಖ್ಯವಲ್ಲ, ಅವು ಸಮಯಕ್ಕೆ ಸರಿಯಾಗಿ ಚಲಿಸುವಂತಿರಬೇಕು. ಕಡಿಮೆ ಸಮಯದಲ್ಲಿ ಬೇಕಾದಂತೆ ಅವುಗಳನ್ನು ತಿರುಗಿಸಲು ಸಾಧ್ಯವಾಗುವಂತಿರಬೇಕು. ಅಲ್ಲದೆ ಅವುಗಳ ಚಲನೆ ಕ್ರಮ ಬದ್ಧವಾಗಿರಬೇಕು. ಇದಕ್ಕೆ ತಕ್ಕ ಪ್ರಚೋದನೆ ಮತ್ತು ಸರಿಯಾದ ನಿಯಂತ್ರಣ ವಿಧಾನ ಅಗತ್ಯ. ನಮ್ಮ ದೇಹದ ಸ್ನಾಯುಗಳು ನರಮಂಡಲಗಳು ಹೇಗೆ ಕೆಲಸ ಮಾಡುತ್ತವೆ ಎನ್ನುವುದನ್ನು ವಿವರವಾಗಿ ತಿಳಿದರೆ, ಇದರಿಂದ ಯಂತ್ರಮಾನವದ ದೇಹರಚನೆಯಲ್ಲಿಯೂ ಸೂಕ್ತ ತಾಂತ್ರಿಕ ವಿಧಾನಗಳನ್ನು ಅಳವಡಿಸಿ ಅದರ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಾಧ್ಯವಾಗಬಹುದೆಂದು ತಜ್ಞರು ಯೋಚಿಸಿದ್ದಾರೆ. ಇದಲ್ಲದೆ ಕೆಲಸಕ್ಕೆ ಅನುಕೂಲವಾಗುವ ರೀತಿಯಲ್ಲಿ ತಕ್ಕ ಚೈತನ್ಯವೊದಗಿಸಲು ವಿವಿಧ ಪ್ರಕಾರದ ಚೈತನ್ಯ ಪೂರೈಸುವ ಸಾಧನಗಳನ್ನು ಅಭಿವೃದ್ಧಿಪಡಿಸಿದ್ದಾರೆ. ನಮ್ಮ ದೇಹಕ್ಕೆ ಕೆಲಸ ಮಾಡಲು ಶಕ್ತಿಬೇಕು ಅಲ್ಲವೇ? ಅದೇ ರೀತಿ ಯಂತ್ರಮಾನವಗಳಿಗೂ ಕೆಲಸ ಮಾಡಲು ಸೂಕ್ತ ಚೈತನ್ಯಬೇಕು. ಇದಕ್ಕಾಗಿ ವಿದ್ಯುತ್ತೋಶಗಳೇ ಅಲ್ಲದೆ, ಪಾರಜದ ಆಕ್ರೈಡ್, ಜಲಜನಕ-ಆಮ್ಲಜನಕ ಇಂಧನವಾಗುಳ್ಳ ಕೋಶಗಳನ್ನೂ ಬಳಸುವುದುಂಟು.
ನಮ್ಮ ದೇಹದ ಸ್ಪರ್ಶಜ್ಞಾನ-ಬಿಸಿ, ತಂಪು, ಒತ್ತಡ ಹಾಗೂ ನೋವು- ಈ ನಾಲ್ಕು ಪ್ರಕಾರದ ಅನುಭವಗಳನ್ನು ಒಳಗೊಂಡಿದೆ. ಯಂತ್ರಮಾನವ ಗಳಲ್ಲಿ ಮುಖ್ಯವಾಗಿ ಒತ್ತಡವನ್ನು ಗ್ರಹಿಸುವ ಶಕ್ತಿ ಇರಬೇಕಾಗುತ್ತದೆ. ಆದರೆ ಬಿಸಿ, ತಂಪು ಹಾಗೂ ನೋವು ಈ ಅನುಭವವನ್ನು ಗ್ರಹಿಸುವ ಸಂವೇದಕ ವ್ಯವಸ್ಥೆಯಿದ್ದರೆ ಅವುಗಳ ಸುರಕ್ಷಿತೆಗೆ, ಕಾರ್ಯುನಿರ್ವಹಣೆಗೆ ಅನುಕೂಲ. ಈ ಸಂವೇದನೆಗಳನ್ನು ವಿದ್ಯುತ್ ಪ್ರಚೋದನೆಗಳ ಮೂಲಕ ಅವು ಗ್ರಹಿಸಬಲ್ಲವು. ಆದರೆ ನಮ್ಮಂತೆ ವಾಸನೆ ಮತ್ತು ರುಚಿಯನ್ನು ಗ್ರಹಿಸುವ ಶಕ್ತಿ ಅವಕ್ಕಿಲ್ಲ. ಕೆಲವು ಬಗೆಯ ಅನಿಲಗಳನ್ನು ಮತ್ತು ತೇವಾಂಶವನ್ನು ಅವು ಗ್ರಹಿಸಬಲ್ಲವು. ಇದಕ್ಕೆ ರಾಸಾಯನಿಕ ಅಥವಾ ವಿದ್ಯುತ್ ಪ್ರಚೋದನೆ ಸಹಾಯಕವಾಗಬಲ್ಲದು.
ಕೆಲಸ ಬಹಳ ಅವಿಶ್ರಾಂತವಾಗಿದ್ದರೆ ಅಥವಾ ಉಷ್ಣ ಪರಿಸರದಲ್ಲಿ ಅವು ಕಾದರೆ ಇವುಗಳನ್ನು ತಂಪುಗೊಳಿಸಬೇಕಾಗುತ್ತದೆ. ಇದಕ್ಕೆ (ಥರ್ಮೊಸ್ಟ್ರಾಟ್) ಶಾಖ ನಿಯಂತ್ರಣ ವ್ಯವಸ್ಥೆಯನ್ನು ಬಳಸಲಾಗುತ್ತದೆ. ನಮ್ಮ ದೇಹದಲ್ಲಿಯೂ ಶಾಖ ನಿಯಂತ್ರಣ ಅಗತ್ಯ, ಅಲ್ಲವೆ?
ಯಂತ್ರಮಾನವದ ಕಣ್ಣು ಅದಕ್ಕೆ ಬೇಕಾದ ಸಂವೇದನೆಯನ್ನು ಗ್ರಹಿಸುವ ಸಾಧನಗಳಲ್ಲೊಂದು. ಇವುಗಳ ಗ್ರಹಣ ಶಕ್ತಿ ನಮ್ಮದಕ್ಕಿಂತ ಭಿನ್ನ. ವಸ್ತುಗಳನ್ನು ಗುರುತಿಸಲು ಅವುಗಳಿಗೆ ನಮ್ಮಂತೆ ಬೆಳಕಿನ ಅಗತ್ಯವಿಲ್ಲ. ಆದರೆ ಅವು ನಮ್ಮಂತೆ ಓದಲಾರವು. ಇತ್ತೀಚೆಗೆ, ಅಕ್ಷರಗಳನ್ನು ನೋಡಿದಾಗ, ಅವುಗಳಿಂದ ಸೂಕ್ತ ಪ್ರಚೋದನೆಯುಂಟಾಗಿ, ಅವುಗಳನ್ನು ವಿಶ್ಲೇಷಿಸಿ, ಅರ್ಥ ಮಾಡಿಕೊಳ್ಳಲು ಸಾಧ್ಯವೆಂದೂ ಅದನ್ನು ಯಾಂತ್ರಿಕ ವಿಧಾನಗಳ ಮೂಲಕ ಅನುಸರಿಸಲು ಸಾಧ್ಯವಾಗಬಹುದೆಂದೂ ತಿಳಿದು ಬಂದಿದೆ. ಇದಕ್ಕೆ ದ್ಯುತಿಕೋಶ ವ್ಯವಸ್ಥೆಯುಳ್ಳ ಕೃತಕ ರೆಟಿನಾಗಳನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ ಈ ಕೆಲಸ ತುಂಬ ಜಟಿಲ. ಇದಕ್ಕೆ ಉಪಯೋಗಿಸಬೇಕಾದ ಸಂಕೇತಗಳು ಮತ್ತು ದ್ಯುತಿಕೋಶಗಳ ಸಂಖ್ಯೆ ಬಹಳ ಹೆಚ್ಚು. ಇದನ್ನು ಸರಳಗೊಳಿಸುವ ಪ್ರಯತ್ನಗಳು ನಡೆದಿವೆ. ಇದಲ್ಲದೆ ವಸ್ತುಗಳ ಉದ್ದ, ಅಗಲ, ದಪ್ಪ ಹೀಗೆ ಮೂರೂ ಆಯಾಮಗಳನ್ನು ಗುರುತಿಸಲು ಅವಕ್ಕೆ ಸಾಧ್ಯವಾಗುವಂತೆ ಮಾಡಲು ಸೂಕ್ತ ವಿಧಾನಗಳನ್ನು ಕಂಡುಹಿಡಿಯುವ ಪ್ರಯತ್ನ ಮುಂದುವರಿದಿದೆ.
ಯಂತ್ರಮಾನವಗಳಿಗೆ ನಮ್ಮ ಮಾತುಗಳನ್ನು ಕೇಳಿ ಅರ್ಥಮಾಡಿಕೊಳ್ಳುವ ಶಕ್ತಿಯಿಲ್ಲ. ಸ್ವಲ್ಪಮಟ್ಟಿಗೆ ನಮ್ಮ ಮಾತುಗಳಿಗೆ ಪ್ರತಿಕ್ರಿಯೆ ತೋರಿಸಬಲ್ಲ ಯಂತ್ರ ವ್ಯವಸ್ಥೆಯನ್ನು ವಿಜ್ಞಾನಿಗಳೂ ರೂಪಿಸಿದ್ದಾರೆ. ಮನುಷ್ಯನ ಭಾಷೆಯನ್ನು (ಮಾತುಗಳನ್ನು) ವಿದ್ಯುತ್ ಸಂಕೇತಗಳಲ್ಲಿ ನಿರೂಪಿಸುವ ವಿಧಾನವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇದು, ಯಂತ್ರಮಾನವಕ್ಕೆ ನಮ್ಮಂತೆ ಮಾತನಾಡುವ ಸಾಮರ್ಥ್ಯವನ್ನು ಕೊಡಲೂ ಅನುಕೂಲವಾಗಬಲ್ಲದು. ಮಾತುಗಳನ್ನು ಹೋಲುವ ಯಾಂತ್ರಿಕ ಧ್ವನಿಯನ್ನು ಉತ್ಪಾದಿಸಬಲ್ಲ ಕಂಪ್ಯೂಟರ್ ವ್ಯವಸ್ಥೆಯನ್ನು ಈಗಾಗಲೇ ಅಭಿವೃದ್ಧಿ ಪಡಿಸಲಾಗಿದೆ. ಕುರುಡರಿಗೆಂದು ರಚಿತವಾದ ಬ್ರೇಲ್ ಗ್ರಂಥಗಳನ್ನು ಓದಲು ಇವುಗಳನ್ನು ಬಳಸಲಾಗುತ್ತಿದೆ. ಆದರೆ ನಮ್ಮಂತೆ ಮಾತನಾಡುವ ಯಂತ್ರಮಾನವ ಬರಲು ಇನ್ನೂ ಸಾಕಷ್ಟು ಸಮಯಬೇಕಾದೀತು.
ಒಟ್ಟಿನಲ್ಲಿ ಯಂತ್ರಮಾನವದ ದೇಹರಚನೆಗೂ ನಮ್ಮ ದೇಹಕ್ಕೂ ಕೆಲವು ಸಾಮ್ಯಗಳಿವೆ ಎನ್ನಬಹುದು. ಆದರೆ ಅವುಗಳ ಕಾರ್ಯನಿರ್ವಹಣೆಯಲ್ಲಿ ಸಾಕಷ್ಟು ವ್ಯತ್ಯಾಸವೂ ಇದೆ. ಸದ್ಯಕ್ಕೆ ಇದು ಅನಿವಾರ್ಯ. ಮಾನವ ನಿರ್ವಹಿಸುವ ಕೆಲಸಗಳನ್ನು ಸಂಪೂರ್ಣವಾಗಿ ಯಂತ್ರಮಾನವ ಮಾಡಬಲ್ಲವಾದರೆ ಅದರ ಉಪಯುಕ್ತತೆ ಇನ್ನೂ ಹೆಚ್ಚುತ್ತದೆ. ವಿಜ್ಞಾನಿಗಳು ಇದಕ್ಕಾಗಿ ಶ್ರಮಿಸುತ್ತಿದ್ದಾರೆ.
✔ ಯಂತ್ರಮಾನವರ ಬಳಕೆ:
ಇತ್ತೀಚಿನ ದಶಕಗಳಲ್ಲಿ ಯಂತ್ರಮಾನವಗಳ ಬಳಕೆ ಬಹಳವಾಗಿ ಹೆಚ್ಚಿದೆ. ಕ್ರಿ.ಶ. 1979 ರಲ್ಲಿ ಅಮೆರಿಕಾ ದೇಶವೊಂದರಲ್ಲಿಯೇ 2000 ಕ್ಕಿಂತ ಹೆಚ್ಚು ಯಂತ್ರಮಾನವಗಳು ಬಳಕೆಯಲ್ಲಿದ್ದವು. ಇಷ್ಟೇ ಸಂಖ್ಯೆಯಲ್ಲಿ ಯುರೋಪಿನಲ್ಲಿದ್ದವ ಎಂದು ಅಂದಾಜು ಮಾಡಲಾಗಿದೆ. ಇವುಗಳ ಉಪಯುಕ್ತತೆಯಿಂದಾಗಿ ಇವುಗಳ ತಯಾರಿಕೆ ಮತ್ತು ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. 1980ರ ಈ ವರ್ಷ ವಿಶ್ವದಾದ್ಯಂತ 60,000 ಕ್ಕಿಂತ ಹೆಚ್ಚು ವಿವಿಧ ಪ್ರಕಾರದ ಯಂತ್ರಮಾನವಗಳು ಬಳಕೆಯಲ್ಲಿರಬಹುದೆಂದು ಊಹಿಸ ಲಾಗಿದೆ. ಇವುಗಳ ತಯಾರಿಕೆ ಮತ್ತು ಮಾರಾಟದಲ್ಲಿ ನಿರತವಾದ ಅನೇಕ ಸಂಸ್ಥೆಗಳಿವೆ. ಇವುಗಳಿಗೆ ಒಳ್ಳೆಯ ಬೇಡಿಕೆಯಿರುವುದರಿಂದ ಇದು ಲಾಭದಾಯಕ ಉದ್ಯಮವಾಗಿದೆ.
✅ಕೈಗಾರಿಕೆಯಲ್ಲಿ : ಯಂತ್ರಮಾನವಗಳ ವಿಶೇಷ ಬಳಕೆ ಕೈಗಾರಿಕೆಗಳಲ್ಲಿ ಎಂದು ಹೇಳಬಹುದು. ಯಂತ್ರಮಾನವಗಳ ಪ್ರಗತಿಗೂ ಅವೇ ಕಾರಣ.
ಕೆಲಸದಲ್ಲಿ ಶೀಘ್ರತೆ ಮತ್ತು ನಿಷ್ಠೆ ಕೈಗಾರಿಕೋದ್ಯಮದಲ್ಲಿ ಅತ್ಯಗತ್ಯ. ಯಂತ್ರಮಾನವದಲ್ಲಿ ಇವೆರಡೂ ಲಭ್ಯ. ಯಂತ್ರಗಳ ವೇಗಕ್ಕೆ ಯಂತ್ರಮಾನವ ಹೊಂದಿಕೊಳ್ಳಬಲ್ಲದು. ದಣಿವು, ಆಲಸ್ಯ ಅದಕ್ಕಿಲ್ಲ. ಅದು ಸಂಘ ಸಂಸ್ಥೆಗಳನ್ನು ಕಟ್ಟುವುದಿಲ್ಲ. ಮುಷ್ಕರ ಹೂಡುವುದಿಲ್ಲ. ಬೇಡಿಕೆಗಳನ್ನು ಮುಂದಿಡುವುದಿಲ್ಲ. ಕಾರಖಾನೆಯ ಧೂಳು, ವಿಷಾನಿಲ, ಸೆಖೆಯಿಂದ ತುಂಬಿದ ವಾತಾವರಣ ದಲ್ಲಿ, ಗದ್ದಲ ತುಂಬಿದ ಪರಿಸರದಲ್ಲಿ ಸ್ವಲ್ಪವೂ ವಿಚಲಿತವಾಗದಂತೆ, ತಾಳ್ಮೆಯನ್ನು ಕಳೆದುಕೊಳ್ಳದೆ ಕೆಲಸ ಮಾಡಲು ಯಂತ್ರಮಾನವಗಳಿಂದ ಮಾತ್ರ ಸಾಧ್ಯ. ಎಷ್ಟೋ ಸಂದರ್ಭಗಳಲ್ಲಿ ಅನೇಕ ಜನ ಮಾಡುವ ಕೆಲಸವನ್ನು ಒಂದೇ ಯಂತ್ರಮಾನವ ನಿರ್ವಹಿಸಬಲ್ಲದು. ಇವುಗಳ ಬಳಕೆಯಿಂದ ಸಮಯದ ಉಳಿತಾಯ ಸಾಧ್ಯ. ಉತ್ಪಾದನೆಯೂ ಹೆಚ್ಚು. ರಶಿಯಾದಲ್ಲಿ ಪಿಸ್ಟನ್‌ಗಳನ್ನು ತಯಾರಿಸುವ ಕಾರಖಾನೆ ಒಂದರಲ್ಲಿ ಯಂತ್ರಮಾನವಗಳನ್ನು ಬಳಸಿದ್ದರಿಂದ ಉತ್ಪಾದನೆಯ ವೆಚ್ಚ ಪ್ರತಿ ಪಿಸ್ಟನ್‌ಗೆ 0.96 ರೂಬಲ್‌ನಿಂದ 0.83 ರೂಬಲ್‌ಗೆ ಇಳಿಯಿತು. 115 ಜನರ ಬದಲಿಗೆ ಕೇವಲ 6 ಜನ ಸಾಕು ಎಂದು ತಿಳಿದು ಬಂದಿತು.
✅ವಾಹನಗಳ ಬಿಡಿಭಾಗಗಗಳನ್ನು ತಯಾರಿಸುವ ಕಾರ್ಖಾನೆಯೊಂದರಲ್ಲಿ. ಯಂತ್ರಮಾನವವೊಂದು ಜೋಡಣಾ ಮುಳ್ಳನ್ನು ಆರಿಸಿ, ಕುಲುಮೆಯಲ್ಲಿಟ್ಟು ಕೆಂಪಗೆ ಕಾಯಿಸಿ, ಅಲ್ಲಿಂದ ಅದನ್ನು ಹೊರಗೆ ತೆಗೆದು, ಕುಲುಮೆಯ ಬಾಗಿಲನ್ನು ಮುಚ್ಚಿ, ಕಾದ ಮುಳ್ಳನ್ನು ನೀರಿನಲ್ಲಿ ಹಾಕುತ್ತದೆ. ಇದಕ್ಕೆ ಹದ ಬರಿಸುವುದು ಎನ್ನುತ್ತಾರೆ. ಇಷ್ಟೆಲ್ಲ ಕೆಲಸ ಮಾಡಲು ಅದಕ್ಕೆ ಒಂದು ನಿಮಿಷ ಸಾಕು.
ಲೋಹಗಳನ್ನು ತಯಾರಿಸುವ ಕಾರಖಾನೆಗಳಲ್ಲಿ ಕರಗಿದ ಲೋಹಗಳನ್ನು ಸಂಗ್ರಹಿಸುವುದು ಕಷ್ಟದ ಕೆಲಸ. ಇದಕ್ಕೆ ಅಗ್ನಿ ನಿರೋಧಕ ಉಡುಪು. ಶಾಖಪ್ರತಿಫಲನ ಕವಚ ಮುಂತಾದವುಗಳನ್ನೆಲ್ಲ ಧರಿಸಿಕೊಂಡು ಬಹಳ ಜಾಗರೂಕತೆಯಿಂದ ಈ ಕೆಲಸಕ್ಕೆ ಹೊರಡಬೇಕಾಗುತ್ತದೆ. ಆದರೆ ಯಂತ್ರಮಾನವಕ್ಕೆ ಈ ಎಲ್ಲ ಪೂರ್ವಸಿದ್ಧತೆಗಳ ಅಗತ್ಯವಿಲ್ಲ.
✅ಯಂತ್ರಮಾನವಗಳನ್ನು ಉತ್ಪಾದನಾ ಘಟಕಗಳ ಮೇಲ್ವಿಚಾರಣೆಯ ಕೆಲಸಕ್ಕೂ ಬಳಸಿಕೊಳ್ಳಲಾಗುತ್ತಿದೆ. ಇವುಗಳ ನಿರ್ಣಾಯಕ ಶಕ್ತಿ ಮನುಷ್ಯನಂತೆ ದಣಿವು, ಆಲಸ್ಯ, ಅಜಾಗರೂಕತೆಯಿಂದ ಹೆಚ್ಚು ಕಡಿಮೆ ಆಗುವುದಿಲ್ಲ. ಕೆಲಸದ ನಿರ್ವಹಣೆಯಲ್ಲಿ ಕಾರಖಾನೆಯಲ್ಲಿ ಎಲ್ಲಾದರೂ ದೋಷವಿದ್ದರೆ, ಇಲೆಕ್ಟ್ರಾನಿಕ್ಸ್ ವ್ಯವಸ್ಥೆಯ ಸಹಾಯದಿಂದ ಅ ದೋಷವನ್ನು ಗುರುತಿಸಿ ತಕ್ಷಣ ಕೆಲಸವನ್ನು ನಿಲ್ಲಿಸುತ್ತದೆ. ಇದರಿಂದ ಅಪವ್ಯಯ ತಡೆಗಟ್ಟಲು ಅನುಕೂಲ.
ಇತ್ತಿಚೆಗೆ ಗಣಿ ಉದ್ಯಮದಲ್ಲಿ ಇವುಗಳನ್ನು ಯಶಸ್ವಿಯಾಗಿ ಬಳಸಿ ಕೊಳ್ಳಲಾಗುತ್ತಿದೆ. ವಿಶೇಷವಾಗಿ ಕಲ್ಲಿದ್ದಲು ಗಣಿಗಳಲ್ಲಿ, ಕಲ್ಲಿದ್ದಲನ್ನು ಅಗೆಯುವ ಕೆಲಸದಲ್ಲಿ ಇವು ತುಂಬ ಅನುಕೂಲಕರ ಸಾಧನಗಳೆಂದು ತಿಳಿದು ಬಂದಿದೆ.
✅ಸಾಗಾಣಿಕೆಯಲ್ಲಿ: ವಾಹನಗಳ ಚಾಲಕನ ಕೆಲಸವನ್ನು ಯಂತ್ರಮಾನವ ನಿರ್ವಹಿಸಬಲ್ಲದು. ವಿಮಾನಗಳಲ್ಲಿ ಪೈಲಟ್ ಕೆಲಸವನ್ನೂ ನಿರ್ವಹಿಸುವ ರಾಬಟ್‌ಗಳಿವೆ. ವಿಮಾನವನ್ನು ನೆಲಬಿಟ್ಟು ಮೇಲೆ ಹಾರಿಸುವುದರಿಂದ ನಿಲ್ದಾಣದಲ್ಲಿ ಇಳಿಸುವವರೆಗಿನ ಕೆಲಸ ಇವುಗಳಿಂದ ಸಾಧ್ಯ.
✅ಸರಕುಗಳ ಸಾಗಾಣಿಕೆಯಲ್ಲಿ ಸ್ವಯಂಚಾಲಿತ ರೈಲುಗಳು ಈಗ ಹೆಚ್ಚಾಗಿ ಬಳಕೆಯಲ್ಲಿ ಬರುತ್ತಿವೆ. ಲಂಡನ್ನಿನ ಕೆಲವು ಭಾಗಗಳಲ್ಲಿ ಇಂತಹ ರೈಲುಗಳನ್ನು ಓಡಿಸಲಾಗುತ್ತಿದೆ. ಈಗ ಇದನ್ನು ಪ್ರಯಾಣಿಕರ ರೈಲುಗಳಿಗೂ ವಿಸ್ತರಿಸಲಾಗುತ್ತಿದೆ. ಇವುಗಳಲ್ಲಿ ಚಾಲಕರೆಲ್ಲ ಯಂತ್ರಮಾನವರೆ! ಈ ಯಂತ್ರಗಳ ಮೇಲ್ವಿಚಾರಣೆಗೆ ಒಬ್ಬ ವ್ಯಕ್ತಿ ಇರುತ್ತಾನೆ. ಅಷ್ಟೆ! ರಸ್ತೆಯಲ್ಲಿಯ ಸಂಚಾರ ಸಂಜ್ಞೆಗಳನ್ನು ಈ ಯಾಂತ್ರಿಕ ಚಾಲಕರು ಗ್ರಹಿಸಿ, ಸಂಚಾರ ನಿಯಮಗಳಿಗನುಸಾರವಾಗಿ ರೈಲುಗಳನ್ನು ಓಡಿಸುತ್ತವೆ. ಇಂತಹ ರೈಲು ವ್ಯವಸ್ಥೆ ಹೆಚ್ಚು ಸುರಕ್ಷಿತ ಎಂದು ತಿಳಿದು ಬಂದಿದೆ. ಇದರ ನಿರ್ವಹಣಾ ವೆಚ್ಚವೂ ಕಡಿಮೆ.
ವಿಯೆಟ್ನಾಂನಲ್ಲಿ ಈ ವ್ಯವಸ್ಥೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ರೈಲು ಓಡಿಸುವುದಕ್ಕೆ ಮುಂಚಿತವಾಗಿ, ಯಂತ್ರಮಾನವ ರೈಲುಹಳಿ ಉದ್ದಕ್ಕೂ ಮುಂದೆ ಸಾಗುತ್ತದೆ. ದಾರಿಯಲ್ಲಿಯ ಅಪಾಯದ ಬಗೆಗೆ ಅದನ್ನು ಹಿಂಬಾಲಿಸಿ ಬರುತ್ತಿರುವ ರೈಲಿಗೆ ಸೂಚನೆ ಕೊಡುತ್ತದೆ. ಈ ಯಂತ್ರ ಗಂಟೆಗೆ 65 ಕಿ.ಮೀ. ಗಿಂತಲೂ ಹೆಚ್ಚಿನ ವೇಗದಲ್ಲಿ ಓಡಬಲ್ಲದು.
ಇತ್ತೀಚೆಗೆ ಮೋಟಾರು ವಾಹನಗಳಲ್ಲಿಯೂ ಯಂತ್ರಮಾನವಗಳನ್ನು ಬಳಸುವ ವಿಧಾನ ಬಳಕೆಯಲ್ಲಿ ಬರುತ್ತಿದೆ. ಇದಕ್ಕೆ ಹೊಸ ಬಗೆಯ ಸಂಚಾರ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ. ಇದಕ್ಕೆ ರೊಬೊಟಗ್ ವ್ಯವಸ್ಥೆ ಎಂದು ಹೆಸರು. ಇದರಲ್ಲಿ ವಾಹನಗಳ ಚಾಲನೆಗೆ ನೆಲದಲ್ಲಿ ಸುಮಾರು 2 ಸೆಂ.ಮೀ. ಆಳದಲ್ಲಿ ಅಳವಡಿಸಿದ ವಿದ್ಯುತ್ ಪೂರಿತ ತಂತಿಗಳನ್ನು ಬಳಸಲಾಗುತ್ತಿದೆ. ಆದರೆ ಈ ವಾಹನಗಳ ವೇಗ ಸುರಕ್ಷತೆಯ ದೃಷ್ಟಿಯಿಂದ ಸದ್ಯಕ್ಕೆ 3 ಕಿ.ಮೀ. ನಿಂದ 10 ಕಿ.ಮೀ. ಮಾತ್ರ ಸೀಮಿತವಾಗಿದೆ. ಈ ವಾಹನ 1 ಟನ್ ಭಾರವನ್ನು ಸಾಗಿಸಬಲ್ಲದು. ಅಮೆರಿಕೆಯ ಕಂಪನಿಯೊಂದು ಕಾರು, ವ್ಯಾಗಿನ್‌ಗಳಲ್ಲಿ ಯಂತ್ರಮಾನವಗಳ ಬಳಕೆಗೆ ಸಂಬಂಧಿಸಿದಂತೆ ಪರಿಶೀಲಿಸುತ್ತಿದೆ. ಇವುಗಳ ವೇಗ ಗಂಟೆಗೆ 50 ಕಿ.ಮೀ. ನಷ್ಟಿರಬಹುದೆಂದು ನಿಯೋಜಿತಪಡಿಸಿದೆ. ಕೆಲವು ಆಸ್ಪತ್ರೆಗಳಲ್ಲಿ ಸಾಮಾನುಗಳನ್ನು ಒಂದು ವಾರ್ಡಿನಿಂದ ಇನ್ನೊಂದು ವಾರ್ಡಿಗೆ ಸಾಗಿಸಲು ಯಂತ್ರಮಾನವ ಚಾಲಿತ ವಾಹನ ವ್ಯವಸ್ಥೆಯನ್ನು ಬಳಸಿಕೊಳ್ಳಲಾಗುತ್ತಿದೆ. ಇದರಲ್ಲಿಯ ಒಂದು ವಾಹನ 60 ಜನರ ಹೊರೆಯನ್ನು ಸಾಗಿಸಬಲ್ಲದು. ಬಂದರುಗಳಲ್ಲಿ, ಕಾರಖಾನೆಗಳಲ್ಲಿ ಹೊರೆಯನ್ನು ಎತ್ತಿ, ಇಳಿಸಿ. ಸಾಗಿಸುವ ಪೋರ್ಟರ್ ಕೆಲಸ ಮಾಡುವ ಯಂತ್ರಮಾನವಗಳೂ ಇವೆ.
ಯಂತ್ರಮಾನವ ಹೊಲಗದ್ದೆಗಳನ್ನು ಉತ್ತು-ಬಿತ್ತು, ಬೆಳೆ-ಬೇಸಾಯ ಮಾಡಲು ಸಹಾಯಕನಾಗಿ ಬರುವ ದಿನವೂ ದೂರವಿಲ್ಲ. ಈ ಕೆಲಸಕ್ಕೆ ವಿಶೇಷವಾಗಿ ಟ್ರ್ಯಾಕ್ಟರ್‌ಗಳನ್ನು ಬಳಸುತ್ತಾರೆ. ಯಂತ್ರಮಾನವನನ್ನು ಟ್ರ್ಯಾಕ್ಟರ್‌ಗಳಲ್ಲಿ ಚಾಲಕ ಕೆಲಸಕ್ಕೆ ಉಪಯೋಗಿಸಿಕೊಳ್ಳಬಹುದು. ಇದರಿಂದ ಟ್ರ್ಯಾಕ್ಟರ್ ಓಡಿಸಲು ಸುಲಭವಾಗುವುದಷ್ಟೇ ಅಲ್ಲ; ಬಿಸಿಲು, ಮಳೆ, ಚಳಿ, ಗಾಳಿಯಲ್ಲಿ ಈ ಕೆಲಸವನ್ನು ಯಂತ್ರಸೇವಕನಿಗೆ ವಹಿಸಿಕೊಟ್ಟು ಹಾಯಾಗಿರಬಹುದು. ಜಪಾನ್ ದೇಶದಲ್ಲಿ ಬೆಳೆಗಳ ಕೊಯ್ಲಿಗೆ ಈಗಾಗಲೇ ಸ್ವಯಂಚಾಲಿತಗಳು ಬಳಕೆಯಲ್ಲಿವೆ.
✔ ಸಮೀಕ್ಷೆ, ಅನ್ವೇಷಣೆ: ಯಂತ್ರಮಾನವಗಳು ವಿಷಮ ಪರಿಸರಗಳಲ್ಲಿ, ಅಪಾಯಕಾರಿ ಸನ್ನಿವೇಶಗಳಲ್ಲಿ ಕೆಲಸ ಮಾಡಬಲ್ಲವು. ಇವುಗಳಿಗೆ ರಕ್ಷಣೆಯ ಸಾಧನಗಳಾಗಲಿ ಆಮ್ಲಜನಕದ ಸಿಲಿಂಡರುಗಳಾಗಲಿ ಬೇಕಿಲ್ಲ. ಇತ್ತೀಚೆಗೆ ಅಮೆರಿಕೆಯ ನೌಕಾದಳ ಸಾಗರದಾಳದ ಮಂಜುಗಡ್ಡೆಯನ್ನು ಗುರುತಿಸಲು ಯಂತ್ರಮಾನವಗಳನ್ನು ಬಳಸುತ್ತಿದೆ. ಇವು 300 ಮೀಟರ್ ಆಳಕ್ಕೆ ಹೋಗಬಲ್ಲವು. ಗಂಟೆಗೆ 5.6 ಕಿ.ಮೀ ವೇಗದಲ್ಲಿ ಸಂಚರಿಸಬಲ್ಲವು. 50 ಕಿ.ಗ್ರಾಂ ಭಾರವನ್ನು ಎತ್ತಬಲ್ಲವು.
ಕೈಗಾರಿಕೆಗಳಲ್ಲಿ ಶಾಖದ ಕೊಠಡಿ, ಇಂಧನ ತುಂಬಿದ ಕೊಠಡಿಗಳನ್ನು ಪರೀಕ್ಷಿಸುವುದು ಅಪಾಯದ ಕೆಲಸ. ಇದಕ್ಕಾಗಿ ಈ ಸಾಧನಗಳನ್ನು ಅನುಕೂಲಕರವಾಗಿ ಬಳಸಲಾಗುತ್ತಿದೆ. ಇತ್ತೀಚೆಗೆ ಇವುಗಳನ್ನು ಅಗ್ನಿಶಾಮಕ ಕೆಲಸಗಳಲ್ಲಿಯೂ ಬಳಸುತ್ತಿದ್ದಾರೆ. ಇವುಗಳಿಗಿರುವ ಸಂವೇದನಾ ಶಕ್ತಿಯಿಂದಾಗಿ, ಇವು ತ್ವರಿತವಾಗಿ ಬೆಂಕಿ ಹತ್ತಿಕೊಂಡಿದ್ದನ್ನು ಗುರುತಿಸಬಲ್ಲವು ಮತ್ತು ತಕ್ಷಣ ಅಗ್ನಿಯ ಉಪಶಮನ ಕೆಲಸವನ್ನು ಪ್ರಾರಂಭಿಸಬಲ್ಲವು.
✔ ಸಂಶೋಧನೆಯಲ್ಲಿ: ಪ್ರಯೋಗ ಶಾಲೆಯಲ್ಲಿ ವಿಶ್ಲೇಷಣಾತ್ಮಕ ಕೆಲಸಗಳಿಗೆ ಇವು ತುಂಬ ಅನುಕೂಲಕರ. ಆದರೆ ಇವುಗಳ ಅತ್ಯಧಿಕ ಪ್ರಮಾಣದ ಬಳಕೆಯಾಗುತ್ತಿರುವುದು ಬಾಹ್ಯಾಂತರಿಕ್ಷ ಸಂಶೋಧನೆಯಲ್ಲಿ, ಬಾಹ್ಯಾಂತರಿಕ್ಷ ಪರಿಸರದಲ್ಲಿ ಮಾನವನಿದ್ದು ಕೆಲಸಗಳನ್ನು ನಿರ್ವಹಿಸುವುದು ಬಹಳ ಕಷ್ಟ. ಆದರೆ ಮಾನವರಹಿತ ನೌಕೆಗಳಲ್ಲಿ ಯಂತ್ರಮಾನವಗಳನ್ನಿಟ್ಟು ಅವುಗಳಿಂದ ಅನ್ವೇಷಣಾಕಾರ್ಯ ನಡೆಸಬಹುದು. ಅಪೊಲೋ ನೌಕಾಯಾನಗಳಲ್ಲಿ ಇವುಗಳನ್ನು ಇಡಲಾಗಿತ್ತು. ಕ್ರಿ. ಶ. 1967 ರ ಏಪ್ರಿಲ್‌ನಲ್ಲಿ ರಶಿಯಾದ ಸರ್ವೆಯರ್-3 ಚಂದ್ರನ ಮೇಲೈ ಮಣ್ಣನ್ನು ಅಗೆದು ಭೂಮಿಗೆ ತಂದಿತು. ವೈಕಿಂಗ್-1 ಮತ್ತು 2 ಕುಜಗ್ರಹದ ಅನ್ವೇಷಣೆ ನಡೆಸಿದವು. ಇದಲ್ಲದೆ ಪ್ರೋಮ ನೌಕೆಯ ಉಡಾವಣೆ, ಬಾಹ್ಯಾಂತರಿಕ್ಷಯಾನಗಳಲ್ಲಿ ಇವು ತುಂಬ ಪ್ರಯೋಜನಕಾರಿಯಾದ ಸಾಧನಗಳು.
ಯಂತ್ರಮಾನವಗಳನ್ನು ಇತ್ತೀಚೆಗೆ ಬೇಹುಗಾರಿಕೆ ಕೆಲಸದಲ್ಲೂ ಬಳಸಲಾಗುತ್ತಿದೆ. ವೈರಿ ಪ್ರದೇಶದ ಮಾಹಿತಿ ಸಂಗ್ರಹಣೆ ಮತ್ತು ರವಾನೆಗೆ ಗುಪ್ತಚಾರರಂತೆ ಅವು ಕೆಲಸ ನಿರ್ವಹಿಸಬಲ್ಲವು. ಅವುಗಳನ್ನು ಅಡಗಿಸಿ ಇಡುವುದು ಸುಲಭ. ಮಾನವನಂತೆ ಇವುಗಳಿಗೆ ಆಹಾರ ನಿದ್ರೆಯ ಅಗತ್ಯವಿಲ್ಲ. ದಣಿವು ಬಳಲಿಕೆಗಳಿಲ್ಲ. ಇವು ಆಸೆ ಆಮಿಶಗಳಿಗೆ ಒಳಗಾಗುವುದಿಲ್ಲ. ಸದಾ ಜಾಗರೂಕರಾಗಿರುವ ಸ್ವಾಮಿನಿಷ್ಠ ಸೇವಕರಾದ ಇವು ನೀರಿನಲ್ಲಿ ಮುಳುಗಿದ್ದು ಅಥವಾ ಅಂತರಿಕ್ಷದಲ್ಲಿ ಸುತ್ತುತ್ತ ತಮ್ಮ ಕೆಲಸ ನಿರ್ವಹಿಸಬಲ್ಲವು. ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯುವ ಬಾಂಬರ್‌ಗಳಲ್ಲಿ ಮತ್ತು ಪ್ರಯೋಗಾತ್ಮಕ ಉಡ್ಡಯನದಲ್ಲಿ ಇವುಗಳನ್ನು ಪೈಲಟ್(ಚಾಲಕ) ಗಳಂತೆ ಬಳಸಬಹುದು.
✔ ವೈದ್ಯಕೀಯ ಕ್ಷೇತ್ರದಲ್ಲಿ: ಆಸ್ಪತ್ರೆಯಲ್ಲಿ ವೈದ್ಯರ ಕೆಲಸವನ್ನು ಕಡಿಮೆಮಾಡುವ ಯಂತ್ರಮಾನವಗಳೂ ಇವೆ. ಸ್ವೀಡನ್ನಿನ ಆಸ್ಪತ್ರೆಗಳಲ್ಲಿ ನರ್ಸಗಳ ಕೆಲಸ ನಿರ್ವಹಿಸುವ ಯಂತ್ರದಾದಿಗಳಿವೆ. ಇವು ಪ್ರತಿಗಂಟೆಗೆ ಒಂದು ಸಾರಿ ರೋಗಿಗಳ ಹೃದಯದ ಬಡಿತ, ನಾಡಿಬಡಿತ, ರಕ್ತದ ಒತ್ತಡ, ರಕ್ತದಲ್ಲಿಯ ಸಕ್ಕರೆಯ ಪ್ರಮಾಣ, ದೇಹದ ಉಷ್ಣತೆ ಮೊದಲಾದವುಗಳನ್ನು ಅಳೆದು ಅವುಗಳ ಪಟ್ಟಿಯನ್ನು ತಯಾರಿಸುತ್ತವೆ. ವರದಿ ನೀಡುತ್ತವೆ. ತೀರ ಅಗತ್ಯದ ಸಂದರ್ಭಗಳಲ್ಲಿ ಅಪಾಯವೊದಗಿದಾಗ ರೋಗಿಯ ಸ್ಥಿತಿ ಹದಗೆಟ್ಟರೆ ಡಾಕ್ಟರನ್ನು ಎಚ್ಚರಿಸಲು ಕರೆ ಗಂಟೆಯನ್ನೂ ಬಾರಿಸುತ್ತವೆ.
✔ ಗೃಹಕೃತ್ಯಗಳಲ್ಲಿ: ಮನೆಗೆಲಸಗಳಲ್ಲಿ ಸಹಾಯಕವಾಗುವ ಯಂತ್ರಮಾನವಗಳು ಇಂದು ತೀರ ಸಾಮಾನ್ಯ. ಇವು ಎಂಜಿಲು ತಟ್ಟೆಯನ್ನೆತ್ತಬಲ್ಲವು. ಪಾತ್ರೆ ತೊಳೆಯಬಲ್ಲವು. ಕಸಗುಡಿಸಬಲ್ಲವು. ತರಕಾರಿ ಹೆಚ್ಚಬಲ್ಲವು. ಅಲ್ಲದೆ ಕಾರು- ವಾಹನಗಳನ್ನು ತೊಳೆಯುವುದು, ಬಟ್ಟೆ ಒಗೆಯುವುದು, ಹಾಸಿಗೆ ಹಾಸುವುದು ಮುಂತಾದ ಕೆಲಸಗಳನ್ನು ಮಾಡುತ್ತವೆ. ಇವುಗಳಿಗೆ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
✔ ಯಂತ್ರಮಾನವದ ಭವಿಷ್ಯ:
ಯಂತ್ರಮಾನವಗಳ ತಯಾರಿಕೆ, ವಿಸ್ತರಣೆ ಮತ್ತು ಸುಧಾರಣೆಯ ಇತಿಹಾಸ ತುಂಬ ರೋಮಾಂಚಕಾರಿ. ಅವು ನಿರ್ವಹಿಸಬಲ್ಲ ಕೆಲಸ, ನಿಜಕ್ಕೂ ಅದ್ಭುತ. ಮಾನವ ನಿಸರ್ಗದ ಸೃಷ್ಟಿಯಾದರೆ, ಯಂತ್ರಮಾನವ ಮಾನವನ ಪ್ರತಿಸೃಷ್ಟಿ ಆದರೆ ಅಪ್ಪನನ್ನೂ ಮೀರಿಸುವ ಮಗನಂತೆ, ಅನೇಕ ಸಂದರ್ಭಗಳಲ್ಲಿ ಇದು ಮಾನವನನ್ನೂ ಮೀರಿಸಬಲ್ಲದು. ಇತ್ತೀಚಿನ ವೈಜ್ಞಾನಿಕ ಕಲ್ಪನಾ ಸಾಹಿತ್ಯದಲ್ಲಿ. ಚಲನಚಿತ್ರಗಳಲ್ಲಿ ವಿಶೇಷ ಸಾಮರ್ಥ್ಯವುಳ್ಳ ಯಂತ್ರಮಾನವಗಳ ಬಳಕೆ ಕಾಣಬಹುದು. 'ಸ್ವತಂತ್ರವಾಗಿ ಯೋಚಿಸುವ, ಮನುಷ್ಯನಂತೆ ವರ್ತಿಸುವ ಯಂತ್ರಮಾನವಗಳೂ ಬರಬಹುದು' ಎನ್ನುವುದು ಕೆಲವರ ಅಭಿಪ್ರಾಯ. ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ' ಮಾನವನ ಬುದ್ಧಿಶಕ್ತಿಯ ಶ್ರೇಷ್ಠವಾದದ್ದೇನಲ್ಲ, ಅದನ್ನು ಮೀರಿಸುವ ಯಂತ್ರಮಾನವಗಳ ನಿರ್ಮಾಣ ಅಸಾಧ್ಯವೇನಲ್ಲ' ಎಂದು ವಾದಿಸುತ್ತಾರೆ. ಆದರೆ ಇದಕ್ಕೆ ವಿರುದ್ಧವಾಗಿ ವಾದಿಸುವವರೂ ಇದ್ದಾರೆ. 'ಕೃತಕ ಯಂತ್ರಸಾಧನಗಳು ನೈಜ ಸೃಷ್ಟಿಯನ್ನು ಮೀರಿಸುವುದು ಸಾಧ್ಯವಿಲ್ಲ. ತಾಂತ್ರಿಕ ವಿಧಾನಗಳಲ್ಲಿ ಜೀವ ವೈಜ್ಞಾನಿಕ ತತ್ತ್ವ ರಚನೆಗಳನ್ನು ಅಳವಡಿಸುವ ರಹಸ್ಯ ಇನ್ನೂ ಗೊತ್ತಾಗಿಲ್ಲ' ಎನ್ನುವುದು ಅವರ ವಾದಕ್ಕೆ ಕಾರಣ. ತೀರ ಸ್ವತಂತ್ರವಾಗಿ ಯೋಚಿಸುವ ಯಂತ್ರಮಾನವಗಳು ಬಂದರೆ ಅವು ವಿಧೇಯಕವಾಗುಳಿಯದೆ, ಅನೇಕ ಹೊಸ ಬಗೆಯ ಆಪತ್ತುಗಳನ್ನು ತಂದೊಡ್ಡಬಹುದು ಎನ್ನುವವರೂ ಉಂಟು. ಆದರೆ ಇದು ದೂರದ ಮಾತು.
ಸದ್ಯಕ್ಕಂತೂ ಯಂತ್ರಮಾನವ, ಮಾನವನಿಗೆ ಸಹಾಯಕ, ನಂಬಿಗೆಯ ಆಜ್ಞಾಧಾರಕ. ಇವುಗಳ ಬಳಕೆ, ಜನಪ್ರಿಯತೆ ಶೀಘ್ರಗತಿಯಲ್ಲಿ ಹೆಚ್ಚುತ್ತಿದೆ. ಜಪಾನ್ ಮುಂಬರುವ ವರ್ಷಗಳಲ್ಲಿ 10 ಲಕ್ಷ ಡಾಲರ್‌ಗಳನ್ನು ವಿವಿಧ ಬಗೆಯ ಯಂತ್ರಮಾನವಗಳ ತಯರಿಕೆಗೆ ಮೀಸಲಾಗಿರಿಸಿದೆ. ಅಮೆರಿಕೆಯಲ್ಲಂತೂ ಕೇವಲ ನೌಕೆಗಳಲ್ಲಿ ಬಳಸುವ ಯಂತ್ರಮಾನವಗಳಿಗೆ ಇಷ್ಟು ಮೊತ್ತವನ್ನು ವಿನಿಯೋಗಿಸ ಲಾಗುತ್ತಿದೆ. ಯಂತ್ರಮಾನವಗಳ ಉಪಯುಕ್ತತೆಗೆ ಇದಕ್ಕಿಂತ ಹೆಚ್ಚಿನ ನಿದರ್ಶನ ಇನ್ನೇನು ಬೇಕು?

.jpg)
.jpg)